Slide
Slide
Slide
previous arrow
next arrow

ಕೃಷಿ ಭೂಮಿಯ ಫಲವತ್ತತೆ ಕಾಪಾಡಲು ಹೈನುಗಾರಿಕೆಯಿಂದ ಮಾತ್ರ ಸಾಧ್ಯ: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ತಾಲೂಕಿನ ಬೆಣಗಾಂವ್‌ ಗ್ರಾಮದಲ್ಲಿ ಬೆಣಗಾಂವ್ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆಯನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು ದೀಪ ಬೆಳಗಿ, ಹಾಲು ಅಳೆಯುವುದರ ಮೂಲಕ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಬೆಣಗಾಂವ್ ಗ್ರಾಮವು ಈ ಮೊದಲು ಶಿರಸಿ ತಾಲೂಕಿನ ದೇವನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಕೇಂದ್ರವಾಗಿ ಕಾರ್ಯನಿರ್ವಹಿಸಿತ್ತಾ ಬಂದಿದ್ದು ಇದೀಗ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಸ್ವತಂತ್ರವಾಗಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವಾಗಿ ಪ್ರಾರಂಭವಾಗಿದೆ ಎಂದರು. ನಾವು ಈ ಭಾಗದ ರೈತರನ್ನು ಸಹಕಾರ ವ್ಯವಸ್ಥೆಗೆ ತರಬೇಕು ಎಂಬ ಉದ್ದೇಶದಿಂದ ಹಾಲು ಉತ್ಪಾದಕ ರೈತರ ಜೊತೆ ಸಭೆ ನಡೆಸಿ ಸರಕಾರ ಹಾಗೂ ಒಕ್ಕೂಟದ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿ ರೈತರ ಮನವೊಲಿಸಿ ಬೆಣಗಾಂವ್‌ನಲ್ಲಿ ಒಂದು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಲಾಯಿತು ಎಂದರು.

ಹೈನುಗಾರಿಕೆಯ ಉದ್ದೇಶ ಮೊದಲನೇಯದಾಗಿ ನಮ್ಮ ಪ್ರತೀ ಕುಟುಂಬಕ್ಕೂ ಹಾಲು, ಮೊಸರು ಹಾಗೂ ಮಜ್ಜಿಗೆಯ ಅವಶ್ಯಕತೆ ಇದ್ದು, ಇವು ಯಾವುದೇ ಇಲ್ಲದೇ ನಮ್ಮ ದಿನಚರಿ ಪರಿಪೂರ್ಣವಾಗುವುದೇ ಇಲ್ಲ. ಎರಡನೇಯದು ನಮ್ಮ ಕೃಷಿ ಜಮೀನುಗಳ ಫಲವತ್ತತೆಗೆ ಬಳಸಲಾಗುವ ಆಕಳಿನ ಸಗಣಿಯಿಂದ ಮಾಡಲ್ಪಟ್ಟ ಗೊಬ್ಬರ, ಇವುಗಳ ಜೊತೆಗೆ ನಮ್ಮ ಜಾನುವಾರುಗಳನ್ನು ಸಾಕಲು ಅನುಕೂಲವಾಗುವ ದೃಷ್ಟಿಯಿಂದ ನಮ್ಮಿಂದ ಉತ್ಪಾದಿಸಲ್ಪಟ್ಟ ಹಾಲನ್ನು ಸ್ಥಳೀಯ ಹಾಲು ಸಂಘಗಳಿಗೆ ಪೂರೈಸುತ್ತಾ ಬಂದಿದ್ದು. ಇದೇ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು ನಮ್ಮ ಶಿರಸಿ ತಾಲೂಕಿನಲ್ಲಿ ಹೈನುಗಾರಿಕೆಯನ್ನು ವ್ಯವಹಾರದ ದೃಷ್ಟಿಯಿಂದ ನಡೆಸುಕೊಂಡು ಬಂದವರು ಕೇವಲ ಕೆಲವೇ ಜನ ಮಾತ್ರ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಬಹಳಷ್ಟು ನಮ್ಮ ನಮ್ಮ ಊರಿನಲ್ಲಿರುವವರು ಬಹುತೇಕ ವಯಸ್ಕರೇ ಆಗಿದ್ದು ಅವರಿಗೆ ಹೈನುಗಾರಿಕೆನ್ನು ಮಾಡಲು ಆಸಕ್ತಿ ಇದ್ದರೂ ಸಹ ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕೆಂಬ ಚಿಂತೆಯಲ್ಲಿ ಇಂದು ನಾವಿದ್ದೇವೆ. ಬೆಣಗಾಂವ್‌ ಭಾಗದ ತಾವುಗಳು ಯಾವುದೇ ಮಿಶ್ರ ತಳಿಯ ಜರ್ಸಿ ಆಕಳುಗಳನ್ನು ಹೆಚ್ಚಾಗಿ ಸಾಕಿಲ್ಲವಾದರು ಸಹ ದೇಶಿ ತಳಿಗಳನ್ನು ಸಾಕಿ ಹೈನಾಗರಿಕೆಯನ್ನು ನಡೆಸಿಕೊಂಡು ಬಂದು ನಿಮ್ಮ ಕೃಷಿ ಭೂಮಿಗಳಿಗೆ ಗೊಬ್ಬರ ಹಾಗೂ ಮನೆ ಬಳಕೆಗೆ ಆಗುವಷ್ಟು ಹಾಲನ್ನು ಉತ್ಪಾದಿಸುತ್ತಿರುವುದು ಬಹಳ ಖುಷಿಯ ವಿಚಾರವಾಗಿದೆ. ಆದರೆ ನನ್ನ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಕೊಟ್ಟಿಗೆಯು ಬದಲಾಗಿ ವಸ್ತುಗಳನ್ನು ದಾಸ್ತಾನು ಮಾಡಿರುವಂತಹ ಉಗ್ರಾಣಗಳಾಗಿರುವುದು ಬೇಸರದ ಸಂಗತಿಯಾಗಿದೆ. ಆ ಭಾಗಗಳಲ್ಲಿ ಬಯಲುಸೀಮೆ ಕಡೆಗಳಿಂದ ಗೊಬ್ಬರ ಬರುತ್ತಿದ್ದು, ಅಂತಹ ಗೊಬ್ಬರನ್ನು ಹದಿನೈದು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಕೃಷಿ ಜಮೀನುಗಳಿಗೆ ಬಳಸಲು ಪ್ರಯತ್ನ ಪಟ್ಟರೆ ಅರ್ಧದಷ್ಟು ಮಣ್ಣು ಸಿಗುವ ಸಾಧ್ಯತೆಗಳೇ ಹೆಚ್ಚಾಗಿದ್ದು ಜಂತುಹುಳುಗಳು ಇಂತಹ ಮಣ್ಣು ಮಿಶ್ರಿತ ಗೊಬ್ಬರದಲ್ಲಿ ಕಂಡುಬರುತ್ತಿದ್ದು ಇಲ್ಲದ ರೋಗಗಳೂ ಸಹ ನಮ್ಮ ಕೃಷಿ ಭೂಮಿಗೆ ತಗಲುವಂತಾಗಿದ್ದು ನಮ್ಮ ಭಾಗದ ಕೃಷಿ ಜಮೀನುಗಳಿಗೆ ಆಕಳ ಸಗಣಿಯಿಂದ ತಯಾರಿಸಲ್ಪಟ್ಟ ಗೊಬ್ಬರವೇ ಅತ್ಯಂತ ಸೂಕ್ತವಾಗಿದ್ದು ನಮ್ಮ ಮನೆಗಳ ದಿನನಿತ್ಯದ ಬಳಕೆಯ ಹಾಲು ಹಾಗೂ ಮೊಸರಿನಂತಹ ಅವಶ್ಯಕತೆಗಳನ್ನು ಇದರಿಂದ ಪೂರೈಸಿದಂತಾಗುತ್ತದೆ.
ಈಗ ಜಿಲ್ಲೆಯಲ್ಲಿ ಹಾಲಿನ ಬೇಡಿಕೆ ಹಿಂದೆಂದಿಗಿಂತಲೂ ಅಧಿಕವಾಗಿದ್ದು, ಕಳೆದ 4 ವರ್ಷಗಳ ಹಿಂದೆ ರೈತರಿಂದ ಖರೀದಿಸಲ್ಪಟ್ಟ ಹಾಲನ್ನು ನಾವು ಮಾರಾಟ ಮಾಡಲು ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗಿತ್ತು, ಆದರೆ ಕಳೆದ 4 ವರ್ಷಗಳಲ್ಲಿ ಪರಿಸ್ಥತಿ ಬಹಳ ಬದಲಾಗಿದ್ದು ಅದರಲ್ಲೂ ಕಳೆದ 2 ವರ್ಷಗಳಲ್ಲಿ ನಮ್ಮ ರಾಜ್ಯಾದಂತ ಪ್ರತೀ ದಿನಕ್ಕೆ 30 ಲಕ್ಷ ಲೀಟರ್‌ನಷ್ಟು ಹಾಲಿನ ಪೂರೈಕೆಯಲ್ಲಿ ಕುಂಠಿತವಾಗಿದ್ದು, ಕಳೆದ 4 ತಿಂಗಳಿನ ಅವಧಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಹಾಲಿನ ಉತ್ಪಾದನೆಯಲ್ಲಿ ಪ್ರತೀ ದಿನಕ್ಕೆ ಸರಾಸರಿ 30 ಸಾವಿರ ಲೀಟರ್‌ನಷ್ಟು ಹಾಲು ಕಡಿಮೆಯಾಗಿದೆ. ಚರ್ಮಗಂಟು ರೋಗ ಕಂಡುಬಂದ ನಂತರ ಜನರಲ್ಲಿ ಹೈನುಗಾರಿಕೆಯನ್ನು ತೊರೆಯಲು ಒಂದು ಕಾರಣ ಸಿಕ್ಕತಾಂಗಿದ್ದು ಹಾಲಿನ ಉತ್ಪಾದನೆಯಲ್ಲಿ ಗಣನೀಯವಾಗಿ ಕುಂಠಿತಗೊಳ್ಳಲು ಇದೂ ಸಹ ಒಂದು ಕಾರಣವಾಗಿದೆ. ಮಾರುಕಟ್ಟೆಯಲ್ಲಿರುವ ಹಾಲಿನ ಬೇಡಿಕೆಗೆ ಅನುಗುಣವಾಗಿ ನಮಗೆ ಹಾಲನ್ನು ಪೂರೈಸಲಾಗುತ್ತಿಲ್ಲ ಎಂಬುದು ಬಹಳ ವಿಷಾದದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಬಂದರೂ ಸಹ ರೈತರಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ಹಾಲಿನ ದರವನ್ನು ಏರಿಸಲೇ ಬೇಕಾದ ವಾತಾವರಣವಿದ್ದು ಮುಂದಿನ ದಿನಗಳಲ್ಲಿ ಹಾಲಿಗೆ ಉತ್ತಮ ದರ ಸಿಗುವ ದಿನಗಳು ಬಂದೇ ಬರುತ್ತದೆ ಆದ ಕಾರಣ ನಮ್ಮ ಮನೆಗಳಲ್ಲಿ ದೇಶೀ ತಳಿಗಳ ಸಾಕಾಣಿಕೆಯ ಜೊತೆಗೆ ಮಿಶ್ರ ತಳಿಯ ಜರ್ಸಿ ಆಕಳನ್ನೂ ಸಹ ಸಾಕಿ ಅತೀ ಹೆಚ್ಚು ಹಾಲು ಉತ್ಪಾದನೆಯನ್ನು ಮಾಡುವುದರ ಜೊತೆಗೆ ಹೈನುಗಾರಿಕೆಯನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗಬೇಕು ಹಾಗೂ ಹಾಲು ಉತ್ಪಾದಕ ರೈತರು ಹೆಚ್ಚು ಹಾಲು ಉತ್ಪಾದನೆಯ ಜೊತೆಯಲ್ಲಿ ಮುಖ್ಯವಾಗಿ ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು, ಜಿಲ್ಲೆಯ ಸಹಕಾರ ವ್ಯವಸ್ಥೆಯ ಅಡಿಯಲ್ಲಿ ಹಾಲು ಉತ್ಪಾದನಾ ಕ್ಷೇತ್ರ ಬೆಳೆಯುತ್ತಿರುವುದರಿಂದ ತಾವೆಲ್ಲರೂ ಇದರ ಜೊತೆ ಕೈ ಜೋಡಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು ನಿಮ್ಮ ಹಾಲು ಸಂಘಕ್ಕೆ ಸಿಗಬಹುದಾದ ಎಲ್ಲಾ ಸೌಕರ್ಯಗಳನ್ನು ಕೊಡಿಸಲು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆಂದು ತಿಳಿಸಿ ಶುಭಕೋರಿದರು.

300x250 AD

ಈ ಸಂದರ್ಭದಲ್ಲಿ ಬೆಣಗಾಂವ್ ಹಾಲು ಸಂಘದ ಅಧ್ಯಕ್ಷರಾದ ಗಣೇಶ ವಡ್ಡರ್, ದೇವನಳ್ಳಿ ಗ್ರಾಮ ಮಂಚಾಯತಿ ಸದಸ್ಯರಾದ ನಾಗರಾಜ ಮರಾಠಿ, ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್. ಬಿಜೂರ್‌, ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ವಿಸ್ತರಣಾ ಸಮಾಲೋಚಕರಾದ ಜಯಂತ ಪಟಗಾರ ಅಭಿಷೇಕ ನಾಯ್ಕ, ದೇವನಳ್ಳಿ ಹಾಲು ಸಂಘದ ಅಧ್ಯಕ್ಷರಾದ ವಿಶ್ವನಾಥ ದಿವೇಕರ, ಹೆಗಡೆಕಟ್ಟಾ ಹಾಲು ಸಂಘದ ಅಧ್ಯಕ್ಷರಾದ ಮಂಜುನಾಥ ಹೆಗಡೆ, ಬೆಣಗಾಂವ್‌ ಸಂಘದ ಆಡಳಿತ ಮಂಡಳಿಯ ಸದಸ್ಯರು, ಕಾರ್ಯದರ್ಶಿಯವರಾದ ದೇವೆಂದ್ರ ಮರಾಠಿ, ಹಾಲು ಉತ್ಪಾದಕರು ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು. ಸುನೀಲ್‌ ಭಟ್‌ ಇವರು ನಿರೂಪಿಸಿ ವಂದಿಸಿದರು.

Share This
300x250 AD
300x250 AD
300x250 AD
Back to top