ಶಿರಸಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಬಾರಿಗೆ ಭೇಟಿ ನೀಡಿದ ನ್ಯಾಕ್ ಕೇಂದ್ರ ಕಛೇರಿಯು, ‘ಬಿ’ ಶ್ರೇಣಿ (2.47) ನೀಡಿದೆ.
ಜೂನ್ 2007ರಲ್ಲಿ ಪ್ರಾರಂಭವಾಗಿದ್ದ ಕಾಲೇಜು ಈವರೆಗೂ ನ್ಯಾಕ್ ಮಾನ್ಯತೆಗೆ ಒಳಪಟ್ಟಿರಲಿಲ್ಲ. ಪ್ರತಿ 05 ವರ್ಷಕೊಮ್ಮೆ ರಾಷ್ಟ್ರೀಯ ಮಾನ್ಯತೆ ಪಡೆಯುವುದು ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ಸರ್ಕಾರಿ ಅನುದಾನಿತ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಕಡ್ಡಾಯವಾಗಿರುತ್ತದೆ. 16 ವರ್ಷದ ಈ ಕಾಲೇಜಿಗೆ ನ್ಯಾಕ್ ಮಾನ್ಯತೆಗೆ ಚಾಲನೆ ನೀಡಿ ಏಳುವರೆ ತಿಂಗಳಲ್ಲಿ ಅವಶ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಈ ಕಾಲೇಜು ನ್ಯಾಕ್ ಮಾನ್ಯತೆಗೆ ಒಳಪಡುವಂತೆ ಮಾಡಲಾಗಿತ್ತು.
ಇವೆಲ್ಲವನ್ನು ಪರಿಶೀಲಿಸಿದ ನ್ಯಾಕ್ ಕೇಂದ್ರ ಕಛೇರಿಯ ಮೌಲ್ಯಮಾಪನ ತಂಡ ಸಮಿತಿಯ ಅಧ್ಯಕ್ಷ ತಮಿಳುನಾಡಿನ ಕೊಹಿಮತ್ತೂರಿನ ಅಲಗಪ್ಪ ವಿಶ್ವವಿದ್ಯಾಲಯದ ಮಾಜಿ ಡೀನ್ ಆಗಿರುವ ಡಾ.ಸೆಂಧಿಲ್ ಎಂ., ಸಮಿತಿಯ ಸಂಚಾಲಕ, ಉತ್ತರ ಪ್ರದೇಶದ ಮೀರತ್ ಎಂಐಟಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಬಸಂತಕುಮಾರ ದಾಸ ಹಾಗೂ ನ್ಯಾಕ್ ಸಮಿತಿಯ ಸದಸ್ಯ, ಸಿಲಿಗುರಿ ಸೂರ್ಯಸೇನ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಣಬ್‌ಕುಮಾರ ಮಿಶ್ರಾ, ಮಾ.02 ಮತ್ತು 03ರಂದು ಭೆಟಿ ನೀಡಿ ಕಾಲೇಜಿನ ಸಂಪೂರ್ಣ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಫಿಸಿಕ್ಸ್-ಕೆಮಿಸ್ಟ್ರಿ ಲ್ಯಾಬ್, ತರಗತಿಗಳ ಕೊಠಡಿಯ ಸ್ಮಾರ್ಟ ಕ್ಲಾಸ್, ವೈಫೈ, ಕಾಲೇಜು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಳವಡಿಸಿದ ಸಿ.ಸಿ.ಕ್ಯಾಮರಾ, ಕಾಲೇಜಿನ ಸಂಪೂರ್ಣ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಮತ್ತು ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ಕ್ರೀಡೆ, ಎನ್.ಎಸ್.ಎಸ್, ಭಾರತ ಸ್ಕೌಟ & ಗೈಡ್ಸ್, ಯುವ ರೆಡ್ ಕ್ರಾಸ್‌ನ ಸಾಧನೆಗಳನ್ನ ಪರಿಶೀಲಿಸಿ, ಪರಿಗಣಿಸಿ ವಿದ್ಯಾರ್ಥಿಗಳ ವೈವಿದ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ವೀಕ್ಷಿಸಿ ಎಲ್ಲಾ ಮಾನದಂಡಗಳ ಮೌಲ್ಯಮಾಪನ ಮಾಡಿ ಈ ಕಾಲೇಜಿನಿಂದ ಸಲ್ಲಿಸಿದ (ಎಸ್.ಎಸ್.ಆರ್) ವರದಿ ವಿದ್ಯಾರ್ಥಿಗಳಿಂದ ಇ-ಮೇಲ್ ಮೂಲಕ ನ್ಯಾಕ್‌ನವರೇ ಪಡೆದುಕೊಂಡ ಮಾಹಿತಿ ಇವೆಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿ ಇಲ್ಲಿರುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ಖುದ್ದಾಗಿ ಪರಿಶೀಲಿಸಿತು. ನ್ಯಾಕಿನ ವೇಳಾ ಪಟ್ಟಿಯಂತೆ ಎಲ್ಲವನ್ನು ವಿಡಿಯೊ ರೆಕಾರ್ಡ್ ಮಾಡಲಾಯಿತು.
ನ್ಯಾಕ್ ಮೌಲ್ಯಮಾಪನ ತಂಡ ಕಾಲೇಜಿನ ಅಭಿವೃದಿ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಎಲ್ಲ ಗೌರವಾನ್ವಿತ ಸದಸ್ಯರೊಂದಿಗೆ ಚರ್ಚಿಸಿ ಕಾಲೇಜಿನ ಅಲ್ಪಾವಧಿಯಲ್ಲಿ ಆದ ಅಭಿವೃದ್ಧಿಯ ಬಗ್ಗೆ ಪ್ರಶಂಸಿಸಿತು. ಅಲ್ಲದೇ ಪ್ರತ್ಯೇಕವಾಗಿ ಎಲ್ಲ ತರಗತಿಯ ವಿದ್ಯಾರ್ಥಿಗಳು, ಮಾಜಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಎಲ್ಲ ಅಧ್ಯಾಪಕರುಗಳೊಂದಿಗೆ ಪ್ರತ್ಯೇಕವಾಗಿ ಚರ್ಚೆ ಸಡೆಸಿ ಅಂತಿಮವಾಗಿ ಮೌಲ್ಯ ಮಾಪನ ವರದಿಯನ್ನು ನ್ಯಾಕ್ ಕೇಂದ್ರ ಕಛೇರಿಗೆ ಸಲ್ಲಿಸಿತು. ಈ ಉನ್ನತ ಸಾಧನೆಗೆ ಕಾರಣರಾದ ಪ್ರಾಂಶುಪಾಲರು, ಐಕ್ಯೂಎಸಿ ಸಂಚಾಲಕರು, ಸಹ ಸಂಚಾಲಕರು ಎಲ್ಲಾ ಬೋಧಕ ಬೋಧಕೇತರರು, ವಿದ್ಯಾರ್ಥಿಗಳು, ಮಾಜಿ ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಎಲ್ಲರನ್ನ ಕರ್ನಾಟಕ ವಿಧಾನಸಭಾ ಅಧ್ಯಕ್ಷರು ಹಾಗೂ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಿ.ಡಿ.ಸಿ ಸದಸ್ಯರುಗಳು, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಕುಳವೆ ಗ್ರಾಮ ಪಂಚಾಯತಿಯ ಅಧ್ಯಕ್ಷ ವಿನಯ ಭಟ್, ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲರಾದ ಪ್ರೊ.ದಾಕ್ಷಾಯಣಿ ಜಿ.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.