ಕಾರವಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಈ ನಡುವಲ್ಲೇ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಹತ್ತಿರ ಬರುತ್ತಿರುವುದು ಪರೀಕ್ಷೆಯ ಮೇಲೆ ಬೀರುವ ಸಾಧ್ಯತೆಗಳ ಕುರಿತು ಆತಂಕಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಶಿಕ್ಷಣ ಇಲಾಖೆಯು ಪರೀಕ್ಷೆಗೆ ಚುನಾವಣೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ.31ರಿಂದ ಪ್ರಾರಂಭವಾಗಿ ಏ.15ರವರೆಗೆ ನಡೆಯಲಿವೆ. ಚುನಾವಣೆಯ ದಿನಾಂಕಗಳು ಇನ್ನೂ ಪ್ರಕಟವಾಗದಿದ್ದರೂ, ಮೇ ಮೊದಲು ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಚುನಾವಣೆ ವೇಳೆ ಶಿಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಇಧರಿಂದ ಪರೀಕ್ಷೆಗಳಿಗೆ ಸಮಸ್ಯೆಗಳಾಗುತ್ತವೆ ಎಂಬ ಆತಂಕಗಳು ಶುರುವಾಗಿದೆ.
ಡಿಸೆಂಬರ್ 2022ರಲ್ಲಿ ಕೊನೆಯ ಬಾರಿಗೆ ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು, ಬೂತ್ ಮಟ್ಟದ ಅಧಿಕಾರಿಗಳಂತೆ 60,000 ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿತ್ತು. ಈ ಬಾರಿಯೂ ಎಸ್‌ಎಸ್‌ಎಲ್‌ಸಿ ಕೇಂದ್ರಗಳಲ್ಲಿ ಸಿಬ್ಬಂದಿಯನ್ನು ಸರಿಯಾಗಿ ನಿಯೋಜನೆಗೊಳಿಸದೇ ಹೋದಲ್ಲಿ ಸಮಸ್ಯೆಗಳು ಎದುರಾಗಬಹುದು ಎಂದು ಶಿಕ್ಷಕರು ಹೇಳಿದ್ದಾರೆ. ಇದಲ್ಲದೆ, 2022-23ನೇ ಸಾಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಮೌಲ್ಯಾಂಕನ(ಬೋರ್ಡ್) ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದ್ದು, ಈ ಪರೀಕ್ಷೆಗಳು ಯಾವಾಗ ನಡೆಯುತ್ತದೆ ಎಂಬ ಕುರಿತಂತೆಯೂ ಗೊಂದಲಗಳು ಮುಂದುವರೆದಿವೆ.
ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ತಡೆಯುವಂತೆ ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಇಂದಿನಿAದ ಆರಂಭವಾಗಬೇಕಿದ್ದ ಪರೀಕ್ಷೆಗಲನ್ನು ಮುಂದೂಡಿಕೆ ಮಾಡಲಾಗಿದೆ. ನ್ಯಾಯಾಲಯದ ವಿಚಾರಣೆ ಬಳಿಕ ಅಂತಿಮ ತೀರ್ಪು ಮಂಗಳವಾರ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಪರೀಕ್ಷೆಗಳ ಜೊತೆಗೆ ಚುನಾವಣೆ ಕರ್ತವ್ಯ ಕೂಡ ಇರುವುದರಿಂದ ಶಿಕ್ಷಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.