Slide
Slide
Slide
previous arrow
next arrow

ಕೆರೆಯಲ್ಲಿ ಹೂಳು; ಬಳಕೆಗೆ ಬಾರದಂತಾದ ಜಲಮೂಲ

300x250 AD

ಕುಮಟಾ: ಅಂತರ್ಜಲ ವೃದ್ಧಿಸುವ ಪಟ್ಟಣದ ವನ್ನಳ್ಳಿಯ ಗೋಳಿ ಬೀರಪ್ಪ ದೇವಸ್ಥಾನದ ಸಮೀಪದಲ್ಲಿರುವ ಕೆರೆಯಲ್ಲಿ ಹೂಳು ತುಂಬಿ, ಗಿಡ-ಗಂಟಿಗಳು ಬೆಳೆದಿದ್ದರಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.
ಕೆರೆ, ಕೊಳ್ಳಗಳು ಆ ಭಾಗದಲ್ಲಿನ ಅಂತರ್ಜಲವನ್ನು ವೃದ್ಧಿಸುವ ಕಾರ್ಯ ಮಾಡುವುದರಿಂದ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಜನವಸತಿ ಪ್ರದೇಶಗಳಲ್ಲಿ ಕೆರೆ, ಕೊಳ್ಳಗಳನ್ನು ಕಟ್ಟಿಸುತ್ತಿದ್ದರಂತೆ. ಇದರಿಂದ ಆ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗುವ ಜತೆಗೆ ಪ್ರಾಣಿ, ಪಕ್ಷಿಗಳಿಗೆ ನೀರಿನ ದಾಹ ತೀರಿಸುತ್ತಿದ್ದವು. ಆದರೆ ಆಧುನಿಕತೆಯಡಿ ನಗರ ಬೆಳೆದಂತೆ ಕೆರೆ, ಕೊಳ್ಳಗಳನ್ನು ಮುಚ್ಚಿ ಹಾಕುವ ಮತ್ತು ಅವುಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದರ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ. ಇದರ ಪರಿಣಾಮ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವಂತಾಗಿದೆ.
ಅದರಂತೆ ಪಟ್ಟಣದ ವನ್ನಳ್ಳಿಯ ಗೋಳಿ ಬೀರಪ್ಪ ದೇವಸ್ಥಾನದ ಸಮೀಪದಲ್ಲಿರುವ ಸರ್ವೆ ನಂಬರ್ 162 ರಲ್ಲಿರುವ ಕೆರೆಯು ಸುಮಾರು 30 ಗುಂಟೆ ವಿಸ್ತೀರ್ಣ ಹೊಂದಿದ್ದು, ಆ ಕೆರೆಯಲ್ಲಿ ಹೂಳು ತುಂಬಿಕೊಂಡು ಗಿಡಗಂಟಿಗಳು ಬೆಳೆದ ಪರಿಣಾಮ, ಸ್ಥಳೀಯರ ಉಪಯೋಗಕ್ಕೆ ಬಾರದಂತಾಗಿದೆ. ದಶಕಗಳ ಹಿಂದೆ ಈ ಕೆರೆಯಲ್ಲಿ ಸದಾ ನೀರು ತುಂಬಿರುವುದರಿಂದ ಸ್ಥಳೀಯರು ಇದೇ ಕೆರೆ ನೀರನ್ನು ಕುಡಿಯುತ್ತಿದ್ದರು. ದನ-ಕರುಗಳಿಗೆ ಹಾಗೂ ಕೃಷಿ ಕಾರ್ಯಕ್ಕೆ ಉಪಯೋಗವಾಗುತಿತ್ತು. ನಂತರದ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಬಾವಿ ಹಾಗೂ ಪುರಸಭೆಯಿಂದ ನೀಡುವ ನೀರಿನ ಸೌಲಭ್ಯಗಳಿಂದ ಕೆರೆಯ ನೀರನ್ನು ಉಪಯೋಗಿಸುವುದನ್ನು ಬಿಟ್ಟರು. ಹಾಗಾಗಿ ಆ ಕೆರೆಯಲ್ಲಿ ಈಗ ಹೂಳು ತುಂಬಿಕೊಂಡು ಗಿಡ-ಗಂಟಿಗಳು ಬೆಳೆದ ಪರಿಣಾಮ ಪ್ರಯೋಜಕ್ಕೆ ಬಾರದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಕೆರೆಯ ಮಹತ್ವ ಅರಿತ ಕೆಲ ಪ್ರಜ್ಞಾವಂತರು ಈ ಕೆರೆಯನ್ನು ಅಭಿವೃದ್ಧಿ ಪಡಿಸಲು ಹೆಣಗಾಡುತ್ತಿದ್ದಾರೆ.
ಅನಾದಿ ಕಾಲದ ಕೆರೆಯ ಅಭಿವೃದ್ಧಿಗೆ ಸಾಕಷ್ಟು ಹೋರಾಟ ನಡೆಸಿ, ಅಗತ್ಯ ದಾಖಲೆಪತ್ರಗಳನ್ನು ಸಂಗ್ರಹಿಸಿ, ಸಂಬಂಧಿಸಿದ ಇಲಾಖೆಗೆ ಸಹ ಮನವಿ ಮಾಡಲಾಗಿದೆ. ಆದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಕೆರೆ ಅಭಿವೃದ್ಧಿ ಕಾಣದೇ ಹಾಳು ಬೀಳುವಂತಾಗಿದೆ. ಕೆರೆಯನ್ನು ಸರಿಯಾಗಿ ಅಭಿವೃದ್ಧಿ ಮಾಡಿದರೆ ವನ್ನಳ್ಳಿ ಸೇರಿದಂತೆ ಪಕ್ಕದ ವಾರ್ಡ್ಗಳಿಗೂ ನೀರು ಪೂರೈಸುವಷ್ಟು ಜಲಮೂಲವಿದೆ. ಸರ್ಕಾರಿ ಜಾಗದಲ್ಲಿ ಸುಮಾರು 30 ಗುಂಟೆ ವಿಸ್ತೀರ್ಣದಲ್ಲಿರುವ ಕೆರೆ ಅಭಿವೃದ್ಧಿಗೆ ಪಕ್ಕದ ಜಮೀನು ಮಾಲಕರು ಸಹ ಬೆಂಬಲ ನೀಡುತ್ತಿದ್ದಾರೆ. ಈಗ 1 ಎಕರೆ ಜಾಗವನ್ನು ಅದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಪುರಸಭೆಯ ಅನುದಾನದಿಂದ ಕೆರೆ ಅಭಿವೃದ್ಧಿಗೆ ಸಾಧ್ಯವಿಲ್ಲದ ಕಾರಣ, ತಾಲೂಕಾಡಳಿತ ಅಥವಾ ಜಿಲ್ಲಾಡಳಿತದಿಂದ ಅನುದಾನ ಒದಗಿಸಿ, ಕೆರೆ ಅಭಿವೃದ್ಧಿಗೆ ಮಾಡಿದರೆ ಈ ಭಾಗದ ಜನರ ನೀರಿನ ಸಮಸ್ಯೆ ನೀಗಲಿದೆ ಎಂಬುದು ಪುರಸಭೆ ಮಾಜಿ ಸದಸ್ಯ ರಮೇಶ ನಾಯ್ಕರ ಅಭಿಪ್ರಾಯವಾಗಿದೆ.

ಕೆರೆಯಿಂದ ಸರಿಸುಮಾರು 1 ಕಿ.ಮೀ. ಅಂತರದಲ್ಲಿ ಸಮುದ್ರವಿದೆ. ವನ್ನಳ್ಳಿಯ ಉಳಿದ ಕಡೆಗಳಲ್ಲಿ ಬಾವಿ ತೆಗೆದರೆ ಉಪ್ಪು ನೀರು ಬರುತ್ತದೆ. ಆದರೆ ಈ ಕೆರೆಯಲ್ಲಿ ಬೇಸಿಗೆಯಲ್ಲಿಯೂ 6 ಅಡಿ ಸಿಹಿ ನೀರು ಇರುತ್ತದೆ. ಸಂಪೂರ್ಣ ಅಭಿವೃದ್ಧಿಯಾದರೆ ಸುತ್ತಮುತ್ತಲಿನ ಪ್ರದೇಶವೂ ಅಭಿವೃದ್ಧಿಯಾಗುವುದರ ಜತೆಗೆ ಕೃಷಿಕರಿಗೂ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

300x250 AD
Share This
300x250 AD
300x250 AD
300x250 AD
Back to top