ಕುಮಟಾ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಹುಸಂಖ್ಯಾತ ಸಮಾಜವಾದ ನಾಮಧಾರಿ ಮುಖಂಡರಿಗೆ ಈ ಬಾರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿಯೇ ಹೈವೋಲ್ಟೇಜ್ ಕ್ಷೇತ್ರ ಎಂದು ಗುರುತಿಸಿಕೊಂಡ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ರಣ ಕಹಳೆ ಮೊಳಗಿದೆ. ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆಯ ಸಾಧ್ಯತೆ ಅಧಿಕವಾಗಿದೆ. ಜೆಡಿಎಸ್ ಈಗಾಗಲೇ ಸೂರಜ್ ನಾಯ್ಕ ಸೋನಿ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿಯಲ್ಲಿ ಹಾಲಿ ಶಾಸಕ ದಿನಕರ ಶೆಟ್ಟಿ ಅವರಿಗೆ ಬಹುಪಾಲು ಟಿಕೆಟ್ ದೊರಕುವ ಸಾಧ್ಯತೆ ಇದೆಯಂತೆ. ಆದರೆ ಕಾಂಗ್ರೆಸ್‌ನಲ್ಲಿ ಮಾತ್ರ 14 ಮಂದಿ ಟಿಕಿಟ್ ಆಕಾಂಕ್ಷಿಗಳಿದ್ದರೂ ಸದ್ಯದ ಮಟ್ಟಿಗೆ ಪ್ರಬಲ ಆಕಾಂಕ್ಷಿಯಾಗಿ ನಾಲ್ಕೈದು ಮಂದಿ ಮಾತ್ರ ಗುರುತಿಸಿಕೊಂಡಿದ್ದಾರೆ. ಈ ನಡುವೆ ಟಿಕೆಟ್ ಹಂಚಿಕೆಯಲ್ಲೂ ಜಾತಿ ರಾಜಕಾರಣ ಕೆಲಸ ಮಾಡುತ್ತಿರುವ ಸುದ್ದಿ ಇದೆ. ಹಾಗಾಗಿ ಈ ಬಾರಿ ಪಕ್ಷದಲ್ಲಿ ಗುರುತಿಸಿಕೊಂಡ ಕ್ಷೇತ್ರದ ಬಹುಸಂಖ್ಯಾತ ಸಮಾಜವಾದ ನಾಮಧಾರಿ ಮುಖಂಡರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಪಕ್ಷದ ಹೈಕಮಾಂಡ್ ಮೇಲಿದೆ.
ಈ ಹಿಂದಿನ ಚುನಾವಣೆಗಳನ್ನು ಗಮನಿಸಿದಾಗ ಜಿಲ್ಲೆಯ ಬಹುಸಂಖ್ಯಾತರಾದ ನಾಮಧಾರಿ ಸಮಾಜದ ರಾಜಕೀಯ ಮುಖಂಡರಿಗೆ ಜಿಲ್ಲೆಯಲ್ಲಿ ಎಲ್ಲಿಯಾದರೂ ಒಂದು ಕಡೆ ಟಿಕೆಟ್ ನೀಡಲಾಗಿದೆ. 2013ರ ಚುನಾವಣೆಯಲ್ಲಿ ಭಟ್ಕಳದಲ್ಲಿ ಜೆ ಡಿ ನಾಯ್ಕರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. 2018ರಲ್ಲಿ ಶಿರಸಿಯಲ್ಲಿ ಭೀಮಣ್ಣ ನಾಯ್ಕರಿಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿಯೂ ಶಿರಸಿಯಲ್ಲಿ ಭೀಮಣ್ಣ ನಾಯ್ಕರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂಬ ಮಾಹಿತಿ ಇದೆ. ಒಂದು ವೇಳೆ ಶಿರಸಿಯಲ್ಲಿ ನಾಮಧಾರಿ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ಕುಮಟಾ ಕ್ಷೇತ್ರದಲ್ಲಿ ನಾಮಧಾರಿಗೆ ಟಿಕೆಟ್ ನೀಡುವ ಸಾಧ್ಯತೆ ಅಧಿಕವಾಗಿದೆ. ಅಲ್ಲದೇ ಜಿಲ್ಲೆಯ ಕರಾವಳಿಯ ಮೂರು ಕ್ಷೇತ್ರದಲ್ಲೊಂದಾದರೂ ಈ ಬಾರಿ ನಾಮಧಾರಿ ಸಮಾಜಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಒತ್ತಡ ಹೇರಲಾಗುತ್ತಿದೆಯಂತೆ. ಹಾಗಾದರೇ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ನಾಮಧಾರಿ ಸಮಾಜದಲ್ಲಿ ಮುಖಂಡರಾಗಿ ಗುರುತಿಸಿಕೊಂಡು ಟಿಕೆಟ್ ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿರುವ ಇಬ್ಬರು ನಾಯಕರು ಇದ್ದಾರೆ. ಒಬ್ಬರು ಈ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಕೆಪಿಸಿಸಿ ಒಬಿಸಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರತ್ನಾಕರ ನಾಯ್ಕ. ಇನ್ನೊಬ್ಬರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿಕೆ ಹರಿಪ್ರಸಾದ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮಂಜುನಾಥ ಎಲ್. ನಾಯ್ಕ ಆಗಿದ್ದಾರೆ. ಇವರಿಬ್ಬರು ಪಕ್ಷದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿರುವುದಲ್ಲದೇ ನಾಮಧಾರಿ ಸಮಾಜಕ್ಕೆ ನಿಕಟ ಸಂಪರ್ಕದಲ್ಲಿರುವ ನಾಯಕರಾಗಿದ್ದಾರೆ.
ಇನ್ನು ರತ್ನಾಕರ ನಾಯ್ಕ ಅವರ ಬಗ್ಗೆ ಹೇಳುವುದಾದರೆ ಸುಮಾರು ಎರಡುಮೂರು ದಶಕಗಳಿಂದಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿ ಗುರುತಿಸಿಕೊಂಡು ಪ್ರಬಲ ಮುಖಂಡರಾಗಿ ಬೆಳೆದ ಕ್ಷಮತೆ ಅವರಲ್ಲಿದೆ. ಮೂರು ಬಾರಿ ತಾಪಂ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಈಗ ಕೆಪಿಸಿಸಿ ಓಬಿಸಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರತ್ನಾಕರ ನಾಯ್ಕ ಅವರು ತಮ್ಮದೆ ಸಂಪರ್ಕದಲ್ಲಿ ಟಿಕೆಟ್‌ಗಾಗಿ ಪ್ರಯತ್ನಶೀಲರಾಗಿದ್ದಾರೆ. ಬಡ ಜನರಿಗೆ ತಮ್ಮ ಕೈಲಾದ ಸೇವೆ ನೀಡುವ ಜೊತೆಗೆ ಜನಪರ ಹೋರಾಟಗಳಲ್ಲೂ ಸಕ್ರೀಯರಾಗಿರುವ ರತ್ನಾಕರ, ಪಕ್ಷದ ಕಾರ್ಯಕರ್ತರ ಪಾಲಿಗೆ ರತ್ನದಂತಾಗಿದ್ದಾರೆ ಎಂದರೆ ತಪ್ಪಾಗಲಾರದು. ಕ್ಷೇತ್ರದಲ್ಲಿ ನಡೆಯುವ ಎಲ್ಲ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಮತ್ತು ಪಕ್ಷದ ಎಲ್ಲ ಕಾರ್ಯ ಚಟುವಟಿಕೆಯಲ್ಲಿ ಸಕ್ರೀಯವಾಗಿರುವುದರಿಂದ ಅವರೊಬ್ಬರ ಕಾಂಗ್ರೆಸ್‌ನಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಜಿಲ್ಲೆ ಕಂಡ ಪ್ರಬುದ್ಧ ರಾಜಕಾರಣಿ, ಮಾಜಿ ಸಚಿವ ಮತ್ತು ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡ ರತ್ನಾಕರ ಅವರು ತಮ್ಮ ರಾಜಕೀಯ ಗುರು ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಟಿಕೆಟ್ ಗಾಗಿ ಪ್ರಯತ್ನಶೀಲರಾದ ಸುದ್ದಿ ಕೂಡ ಇದೆ.
ಇನ್ನೋರ್ವರಾದ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಎಲ್.ನಾಯ್ಕ ಅವರು ಕಾಂಗ್ರೆಸ್ ಪಕ್ಷದಲ್ಲಿ ಬಹಳ ವರ್ಷಗಳಿಂದಲೂ ಗುರುತಿಸಿಕೊಂಡಿದ್ದರು. ಬಿಇ ಪದವಿಧರರಾದ ಅವರು ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುವ ಜತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ ಕೆ ಹರಿಪ್ರಸಾದ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು, ಉತ್ತರಕನ್ನಡ ಜಿಲ್ಲೆಯಲ್ಲಿ ಬಿ ಕೆ ಹರಿಪ್ರಸಾದ ಅವರ ಅಭಿಮಾನಿ ಬಳಗವನ್ನು ಕಟ್ಟಿದ ಕೀರ್ತಿ ಮಂಜುನಾಥ ನಾಯ್ಕರಿಗೆ ಸಲ್ಲುತ್ತದೆ. ಈ ಹಿಂದೆ ಜಿಲ್ಲೆಯಲ್ಲಿ ಆರ್.ವಿ.ದೇಶಪಾಂಡೆ ಮತ್ತು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಅಭಿಮಾನಿ ಬಳಗ ಮಾತ್ರ ಇತ್ತು. ಈಗ ಮಂಜುನಾಥ ಎಲ್.ನಾಯ್ಕ ಅವರಿಂದ ಬಿ.ಕೆ ಹರಿಪ್ರಸಾದ ಅವರ ಅಭಿಮಾನಿಗಳ ಬಳಗ ಕೂಡ ಜಿಲ್ಲೆಯಲ್ಲಿ ಕಾರ್ಯಾಚರಿಸುವಂತಾಗಿದೆ. ಅಲ್ಲದೇ ಬಿ ಕೆ ಹರಿಪ್ರಸಾದ ಕೂಡ ಈ ಜಿಲ್ಲೆಯಲ್ಲಿ ಸಂಚರಿಸುವ ಮೂಲಕ ಕಾಂಗ್ರೆಸ್‌ಗೆ ಇನ್ನಷ್ಟು ಬಲತಂದುಕೊಡುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಾಮಧಾರಿ ಸಮಾಜದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ರತ್ನಾಕರ ನಾಯ್ಕ ಅಥವಾ ಮಂಜುನಾಥ ಎಲ್ ನಾಯ್ಕ ಅವರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿದರೆ, ಆ ಸಮಾಜಕ್ಕೆ ಕಾಂಗ್ರೆಸ್ ಗೌರವ ನೀಡಿದಂತಾಗುತ್ತದೆ. ಸದಾ ಹಿಂದುಳಿದವರ ಮತ್ತು ರೈತರ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಮಧಾರಿ ಸಮಾಜದ ಮುಖಂಡಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಪಕ್ಷ ಹಿಂದುಳಿದ ವರ್ಗಗಳ ಪರವಾಗಿದೆ ಎಂಬುದನ್ನು ಸಾಬೀತುಪಡಿಸಲಿ. ಅಲ್ಲದೇ ಕ್ಷೇತ್ರದಲ್ಲಿ ಪ್ರಬಲ ಸಮಾಜಕ್ಕೆ ಟಿಕೆಟ್ ನೀಡುವುದರಿಂದ ಕಾಂಗ್ರೆಸ್ ಗೆಲುವಿಗೂ ಹೆಚ್ಚು ಸಹಾಯಕಾರಿಯಾಗಲಿದೆ ಎಂಬುದು ಹಲವು ರಾಜಕೀಯ ಪಡಿಂತರ ಲೆಕ್ಕಾಚಾರವಾಗಿದೆ. ಹಾಗಾಗಿ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದರ ಮೇಲೆ ಮುಂದಿನ ರಾಜಕೀಯ ಚಿತ್ರಣ ಕಂಡುಬರಲಿದ್ದು, ಕಾಂಗ್ರೆಸ್‌ನ ಚುನಾವಣಾ ಭವಿಷ್ಯ ಕೂಡ ನಿರ್ಧಾರವಾಗಲಿದೆ.