ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಣೇಶ ಮಂಟಪದಲ್ಲಿ ಇಲ್ಲಿಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ವಾರ್ಷಿಕೋತ್ಸವ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಕನ್ನಡ ಉಪನ್ಯಾಸಕ ಡಾ.ಸರ್ಫ್ರಾಜ ಚಂದ್ರಗುತ್ತಿ, ಆತ್ಮವಿಶ್ವಾಸ ಇದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ನಮ್ಮೋಳಗಿನ ಗುರುವನ್ನು ತಿಳಿದುಕೊಳ್ಳಬೇಕು. ನಮ್ಮನ್ನು ಆಕರ್ಷಿಸುವ ಕತ್ತಲೆಯಿಂದ ದೂರ ಇದ್ದು ನಮ್ಮ ಸರಿಯಾದ ನಡುವಳಿಕೆಯ ಮೂಲಕ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವರ್ತಕ ಅನಂತ ಶಾನಭಾಗ, ವಿದ್ಯಾರ್ಥಿಗಳು ಹೆಚ್ಚು ಅಂಕವನ್ನು ಪಡೆಯುವುದರೊಂದಿಗೆ ಜೀವನ ಶಿಕ್ಷಣ ಹಾಗೂ ಜ್ಞಾನವನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಹೇಳಿದರು.
ಹಾರ್ಸಿಕಟ್ಟಾ ಗ್ರಾ.ಪಂ ಅಧ್ಯಕ್ಷೆ ವಿದ್ಯಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದು ಸಾಧನೆ ಮಾಡಿದ ಜಯರಾಮ ಲಕ್ಷ್ಮೀಶ ನಾಯ್ಕ, ನಾಗಶ್ರೀ ಮಂಜುನಾಥ ನಾಯ್ಕ ಹಾಗೂ ಸೌಜನ್ಯ ನಾಗರಾಜ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಸತಿ ಶಾಲೆಯ ಪ್ರಾಂಶುಪಾಲ ಸುಧಾಕರ ಎಂ.ನಾಯ್ಕ ಸ್ವಾಗತಿಸಿದರು. ಶಿಕ್ಷಕ ಜಾವೇದ್ ಪ್ರಾಸ್ತಾವಿಕ ಮಾತನಾಡಿದರು. ಅಂಜಲಿ ಶಾಸ್ತ್ರೀ ವರದಿ ವಾಚಿಸಿದರು. ಹೇಮಾವತಿ ವಂದಿಸಿದರು. ಮುಕ್ತಾ ಎಂ.ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.