ಶಿರಸಿ: ಕುಟುಂಬಸ್ಥರೊಂದಿಗೆ ಕಾಶಿ, ರಾಮೇಶ್ವರ ಯಾತ್ರೆಗೆ ತೆರಳಿದ ಸಂಭ್ರಮದ ಗಳಿಗೆಯಲ್ಲಿ ಇಲ್ಲಿನ ಲೇಖಕ ಪ್ರೋ. ಡಾ.ಜಿ. ಎ. ಹೆಗಡೆ ಸೋಂದಾ ತಮ್ಮ 12 ನೆಯ ಕನ್ನಡ ಕೃತಿ ‘ನಮ್ಮ ಗಣಪತಿ’ ಗ್ರಂಥವನ್ನು ಕಾಶಿಯಲ್ಲಿ ಲೋಕಾರ್ಪಣೆಗೊಳಿಸಿ ಕೃತಾರ್ಥರಾದರು.
ಕಾಶಿಯ ವಿಶ್ವನಾಥನ ಸನ್ನಿಧಾನದಲ್ಲಿ ಹೊಸದಾಗಿ ನಿರ್ಮಾಣಗೊಂಡ ದೇವಾಲಯದ ಪ್ರಾಂಗಣದಲ್ಲಿ ಅಚ್ಚುಕಟ್ಟಾಗಿ ಏರ್ಪಡಿಸಿದ ಈ ಕಾರ‍್ಯಕ್ರಮವನ್ನು 300ಕ್ಕೂ ಹೆಚ್ಚಿನ ಶೃದ್ಧಾಳುಗಳು ಸಾಕ್ಷಿಯಾಗಿ ಕಣ್ತುಂಬಿಸಿಕೊಂಡರು.
ಗ್ರಂಥ ಲೋಕಾರ್ಪಣೆಗೊಳಿಸಿದ ಕಾಶಿಯ ವಿದ್ವನ್ಮಣಿ ದಯಾ ಪಂಡಿತ ಜಿ.ಎ. ಹೆಗಡೆಯವರಿಗೆ ಶುಭ ಹಾರೈಸಿ, ಇತ್ತೀಚಿಗಿನ 15 ವರ್ಷಗಳಲ್ಲಿ, ಈ ಪವಿತ್ರ ತಾಣದಲ್ಲಿ ಪ್ರಪ್ರಥಮವಾಗಿ ಕನ್ನಡ ಗ್ರಂಥವೊಂದು ಬಿಡುಗಡೆಯಾಗುತ್ತಿರುವುದು ಭುವನದ ಭಾಗ್ಯ ಹಾಗೂ ಕನ್ನಡದ ಭಾಷೆಯ ಭಾಗ್ಯ. ಹೆಗಡೆಜಿ ಪುಣ್ಯವಂತರು. ವಿಶ್ವನಾಥನ ಆರ್ಶೀವಾದ ಸದಾ ಅವರಿಗೆ ಬೆಂಬಲವಾಗಿರಲಿ ಎಂದರು.
ತುಮಕೂರು ಮೂಲದ ಬೆಂಗಳೂರಿನ ವಿದ್ವಾನ ಶಿವಶಂಕರ ಶಾಸ್ತ್ರೀಗಳು “ನಮ್ಮ ಗಣಪತಿ” ಪುಸ್ತಕವನ್ನು ಪರಿಚಯಿಸುತ್ತಾ, ಈ ಗ್ರಂಥದಲ್ಲಿ ವಿಶ್ವ ಪ್ರಸಿದ್ಧ ಗಣಪತಿ ತಾಣಗಳು, ಗಣೇಶನಿಗೆ ಸಂಬಂಧಿಸಿದ ಅಪರೂಪದ 31 ಕಥೆಗಳು, ಗಣಪತಿ ವೃತ ಪೂಜೆಗಳ ವಿವರ, ಕಲಾಮಾಧ್ಯಮಗಳಲ್ಲಿ ಇರುವ ಗಣಪತಿ ಪೂಜೆಯ ಮಹತ್ವ, ಜೊತೆಗೆ ಪ್ರಥಮ ವಂದಿತನ ಕುರಿತಾಗಿ ಕೆಲವು ಅಪರೂಪದ ವಿಶಿಷ್ಟ ಮಾಹಿತಿಗಳು ಇತ್ಯಾದಿ ವಿವರಗಳು ಹೃದಯಂಗಮವಾಗಿ ಮೂಡಿ ಬಂದಿವೆ. ಹಾಗಾಗಿ ಇದು ಪ್ರತಿಯೊಬ್ಬರೂ ಓದಬಹುದಾದ, ಓದಲೇಬೇಕಾದ ಗ್ರಂಥ ಎಂದರು.
ಲೇಖಕರ ನುಡಿ ನುಡಿದ ಡಾ.ಜಿ.ಎ. ಹೆಗಡೆ ಸೋಂದಾ, ಶಿರಸಿಯ ಮಹಾಗಣಪತಿಗೆ ಭಕ್ತಿಯಿಂದ ಅರ್ಪಿಸಿದ ಈ ಗ್ರಂಥ ಕಾಶಿಯಂತಹ ಪುಣ್ಯ ಕ್ಷೇತ್ರದಲ್ಲಿ ಲೋಕಾರ್ಪಣೆಗೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯ ಸುಕೃತವಾಗಿ ಇದು ಅವಿಸ್ಮರಣೀಯ ಕ್ಷಣ ಎಂದರು. ವೈಚಾರಿಕತೆಯ ಎತ್ತರದಲ್ಲಿ ನಿಂತು ಗಣಪತಿಯನ್ನು ಅರಿಯಲು ಆಸಕ್ತಿವುಳ್ಳ ಆಸ್ತಿಕರಿಗೆ ದೈವಭೀರುಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ ಪ್ರವಚನಕಾರರಿಗೆ, ಮತ್ತು ವೈಚಾರಿಕ ಸುಮನಸರುಗಳಿಗೆ ಈ ಗ್ರಂಥ ಕೈದೀವಿಗೆಯಾಗಿ ಮಾರ್ಗದರ್ಶಿಯಾಗಿದೆ ಎಂದು ವಿನಮ್ರರಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಹಯಾತ್ರಿ ಪಿ.ಎಸ್. ಸೀತಾರಾಮ ಮೂರ್ತಿ ಬೆಂಗಳೂರು, ನಮ್ಮ ಈ ಯಾತ್ರೆಯಲ್ಲಿ ಅಪರೂಪದ ಬಹುಮುಖೀ ಪ್ರತಿಭೆಯ ವ್ಯಕ್ತಿ ವಿದ್ವಾಂಸ ಪ್ರೋ. ಡಾ.ಜಿ. ಎ. ಹೆಗಡೆ ಸೋಂದಾ, ತಮ್ಮ ಕುಟುಂಬೀಯರೊಂದಿಗೆ ಭಾಗಿಯಾಗಿದ್ದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಕಾಶಿಯಲ್ಲಿ ಈ ಗ್ರಂಥ ಬಿಡುಗಡೆಯ ಸೌಭಾಗ್ಯ ಅಂದರೆ ಕೋಟಿ ಜನರಲ್ಲಿ ಒಬ್ಬರಿಗೇ ದೊರೆಯುವ ಅವಕಾಶವಾಗಿದೆ. ಹೀಗಾಗಿ ನಾನು ಹೆಗಡೆಯವರ ಅಭಿಮಾನಿ ಮತ್ತು ಅವರ ಬರೆದ ಎಲ್ಲಾ ಪುಸ್ತಕಗಳ ಓದುಗ ಎನ್ನುತ್ತಾ ಶುಭ ಹಾರೈಸಿದರು.
ವಿಜಯಲಕ್ಷ್ಮಿ ಪ್ರಕಾಶನ ಮೈಸೂರು ಪ್ರಕಟಿಸಿದ ಈ ಗ್ರಂಥಕ್ಕೆ ಶಿರಸಿ ಮಹಾಗಣಪತಿ ದೇವಾಲಯದ ಮುಖ್ಯ ಧರ್ಮದರ್ಶಿ ಜಿ.ಎಸ್. ಹೆಗಡೆ ಲಿಂಗದಕೋಣ ಅವರ ಮುನ್ನುಡಿ, ಶಿರಸಿಯ ಕವಿ ಕೃಷ್ಣಪದಕಿ ಶುಭ ನುಡಿ ಶೋಭೆ ತಂದಿದೆ ಎಂದ ಮೈಸೂರಿನ ವಿದ್ವಾಂಸ ನಾಗಪ್ಪ ಬಾಲಸುಬ್ರಮಣ್ಯಂ ಅವರು ಕಾರ‍್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು.