ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘಕ್ಕೆ 75 ವರ್ಷ ತುಂಬಿರುವ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಾ.11ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾಗೇಂದ್ರ ವಿ.ಹೆಗಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಮೃತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಪಂಚಾಯತ ರಾಜ್ಯ ವಿಕೇಂದ್ರಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ, ವಜ್ರಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾ ಗಾಂವ್ಕರ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್, ಸಹಕಾರಿ ಸಂಘಗಳ ಉಪನಿಬಂಧಕ ಮಂಜುನಾಥ ಆರ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಧ್ಯಾಹ್ನ 3ರಿಂದ ನಡೆಯುವ ವಿಚಾರಗೋಷ್ಠಿಯನ್ನು ತಾಲೂಕ ಮಾರ್ಕೆಟಿಂಗ್ ಸೊಸೈಟಿ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಉದ್ಘಾಟಿಸಲಿದ್ದು, ಹಿರಿಯ ಸಹಕಾರಿ ಗಜಾನನ ಗಾಂವ್ಕರ್ ಬಾರೆ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಷ್ಠಿಯಲ್ಲಿ ‘ಸಹಕಾರ ಸಂಘಗಳಲ್ಲಿ ಸದಸ್ಯರ ಜವಾಬ್ದಾರಿ’ ವಿಷಯದ ಕುರಿತು ಸಹಕಾರಿ ಸಂಘಗಳ ಲೆಕ್ಕಪತ್ರ ಇಲಾಖೆ ಕಾರವಾರದ ನಿವೃತ್ತ ಉಪನಿರ್ದೇಶಕ ಜಿ.ಕೆ.ರಾಮಪ್ಪ ಹಾಗೂ ‘ಸಹಕಾರ ಸಂಘಗಳು ಮತ್ತು ಯುವಜನತೆ’ ಈ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಹಕಾರಿಗಳು ಶಿರಸಿಯ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ್ ಹೆಗಡೆ ಕಾಗೇರಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ಶಿವರಾಮ ಭಾಗ್ವತ್ ಕನಕನಹಳ್ಳಿ ಮತ್ತು ಸಂಗಡಗಿರಿoದ ಸಂಗೀತ ಕಾರ್ಯಕ್ರಮ ನಂತರ ದಕ್ಷಿಣ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ತಿಮ್ಮಣ್ಣ ನಾರಾಯಣ ಭಟ್, ಉಪಾಧ್ಯಕ್ಷ ದತ್ತಾತ್ರೇಯ ಭಟ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಗಣಪತಿ ಭಟ್ ಹೊಸಗದ್ದೆ ಮಾಹಿತಿ ನೀಡಿದರು.