ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಒಂದು ವಾರದ ಭಾರತ ಭೇಟಿಯ ನಂತರ ಯುಎಸ್‌ಗೆ ಮರಳಿದ್ದಾರೆ. ಭಾರತದಲ್ಲಿ ಅವರು ಹಲವಾರು ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ. ಭಾರತಕ್ಕೆ ವಾಪಾಸ್ ತೆರಳಿರುವ ಗೇಟ್ಸ್ ಅವರು ತಮ್ಮ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ಮತ್ತೆ ಭಾರತಕ್ಕೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿ, ಬ್ರಿಡ್ಜ್ ಚಾಂಪಿಯನ್ ಅಂಶುಲ್ ಭಟ್, ಯೂಟ್ಯೂಬರ್ ಮತ್ತು ‘ಮಿಸ್ಮ್ಯಾಚ್ಡ್’ ತಾರೆ ಪ್ರಜಕ್ತಾ ಕೋಲಿ, ಎನ್‌ಜಿಒ ಕಾರ್ಯಕರ್ತರು, ಇ-ರಿಕ್ಷಾ ಡ್ರೈವ್ ಮುಂತಾದ ಭಾರತದಲ್ಲಿನ ತಮ್ಮ ಚಟುವಟಿಕೆಗಳನ್ನು ಒಳಗೊಂಡ ಭೇಟಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ನಾನು ಭಾರತದಿಂದ ತೆರಳುತ್ತಿದ್ದೇನೆ. ಮತ್ತೆ ಭಾರತಕ್ಕೆ ಹಿಂದಿರುವುದನ್ನು ಎದುರು ನೋಡುತ್ತಿದ್ದೇನೆ. ನಾನು ಭಾರತಕ್ಕೆ ಭೇಟಿ ನೀಡುವುದನ್ನು ಇಷ್ಟಪಡುತ್ತೇನೆ ಏಕೆಂದರೆ ಪ್ರತಿ ಪ್ರವಾಸವು ಕಲಿಯಲು ಅಪೂರ್ವ ಅವಕಾಶವಾಗಿದೆ” ಎಂದು ಗೇಟ್ಸ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಇದಲ್ಲದೆ, ಗೇಟ್ಸ್, “ಕಳೆದ ವಾರ ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿ ನನ್ನ ಪ್ರಯಾಣದ ಸಮಯದಲ್ಲಿ, ನಾನು ಕೆಲವು ಅದ್ಭುತ ಜನರನ್ನು ಭೇಟಿಯಾದೆ, ಅವರು ಪ್ರಪಂಚದ ಆರೋಗ್ಯ, ಹವಾಮಾನಕ್ಕೆ ಪರಿಹಾರಗಳನ್ನು ಕಂಡುಹಿಡಿಯಲು ನಾವೀನ್ಯತೆ, ವಿಜ್ಞಾನ ಮತ್ತು ಸಹಯೋಗದ ಶಕ್ತಿಯನ್ನು ಹೇಗೆ ಬಳಸುತ್ತಿದ್ದಾರೆಂದು ನನಗೆ ಕಲಿಸಿದರು” ಎಂದಿದ್ದಾರೆ
ಭಾರತ ಪ್ರವಾಸದ ಸಮಯದಲ್ಲಿ ಗೇಟ್ಸ್ ಪ್ರಧಾನಿ ಮೋದಿ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ, ಝೆರೋಧಾ ಸಂಸ್ಥಾಪಕ ನಿತಿನ್ ಮತ್ತು ನಿಖಿಲ್ ಕಾಮತ್, ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್, ಪುರಿ, ಸ್ಮೃತಿ ಇರಾನಿ ಮತ್ತು ಅಶ್ವಿನಿ ವೈಷ್ಣವ್ ಸೇರಿದಂತೆ ಭಾರತದ ಹಲವಾರು ಉನ್ನತ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದ್ದಾರೆ.