ಅಂಕೋಲಾ: ಅಮೆರಿಕೆಯಲ್ಲಿ ಕನ್ನಡ ಧ್ವನಿಯನ್ನು ಹುಟ್ಟು ಹಾಕಿದವರು ನಮ್ಮ ನಾಡಿನಿಂದ ಅಮೇರಿಕಾಗೆ ಹೋದ ಮೊದಲ ತಲೆಮಾರಿನ ಜನ. ಕನ್ನಡ ಒಂದು ಭಾಷೆಯಷ್ಟೆ ಅಲ್ಲ, ಅದೊಂದು ಸಂಸ್ಕೃತಿ. ಕನ್ನಡವನ್ನು ಉಳಿಸಲು ತಕ್ಕ ಪರಿಸರ ಬೇಕು. ಅಂತಹ ಪರಿಸರ ವಲಸಿಗರ ಮಕ್ಕಳಿಗೆ ದೊರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಕನ್ನಡ ಧ್ವನಿ ಮುಂದುವರೆಯುವ ಬಗ್ಗೆ ಅನುಮಾನಗಳಿವೆ ಎಂದು ಬೋಸ್ಟನ್ ನಿವಾಸಿ ಹಿರಿಯ ತಂತ್ರಜ್ಞೆ ವೈಶಾಲಿ ಹೆಗಡೆ ಹೇಳಿದರು.
ಅವರು ಅಂಕೋಲೆಯ ಮಿತ್ರ ಸಂಗಮ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಂವಾದವನ್ನು ವೈಶಾಲಿ ಹೆಗಡೆ ಮತ್ತು ಅವರ ಪತಿ ಮಧು ಮತ್ತೀಹಳ್ಳಿ ನಿರ್ವಹಿಸಿದ ಬಗೆ ಉಪಸ್ಥಿತ ಮಹನೀಯರ ಮೆಚ್ಚುಗೆ ಗಳಿಸಿತು.
ಸಭೆಯಲ್ಲಿ ಅಮೆರಿಕೆಯಲ್ಲಿ ಕನ್ನಡ ನಡೆಯುತ್ತಿರುವ ಕನ್ನಡಪರ ಕಾರ್ಯಗಳು, ವಲಸೆಗಾರರ, ಸಮಸ್ಯೆ, ಅಮೆರಿಕೆಯ ಪ್ರಸಕ್ತ ವಿದ್ಯಮಾನಗಳು, ಅಲ್ಲಿನ ಆರ್ಥಿಕ, ಸಾಮಾಜಿಕ ವಿದ್ಯಮಾನಗಳ ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ವೈಶಾಲಿಯವರ ಅಸ್ಕಲಿತ ಕನ್ನಡ ವಿಶೇಷ ಗಮನ ಸೆಳೆಯಿತು.
ಚರ್ಚೆಯಲ್ಲಿ ಶಾಂತಾರಾಮ ನಾಯಕ ಹಿಚಕಡ, ಡಾ.ರಾಮಕೃಷ್ಣ ಗುಂದಿ, ಎನ್.ವಿ.ನಾಯಕ, ಹೊನ್ನಮ್ಮ ನಾಯಕ, ಡಾ.ಎನ್.ಎಮ್.ಹೆಗಡೆ, ಜಯಶೀಲ ಆಗೇರ, ಜೆ.ಪ್ರೇಮಾನಂದ ಮುಂತಾದವರು ಭಾಗವಹಿಸಿದ್ದರು. ಮೋಹನ ಹಬ್ಬು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೊಪಾಲಕೃಷ್ಣ ನಾಯಕ ವಂದಿಸಿದರು, ಮಹಾಂತೇಶ ರೇವಡಿ ನಿರೂಪಿಸಿದರು.