ಕಾರವಾರ: ಮುಂಬರುವ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲು ಕೆಲವೇ ದಿನಗಳು ಉಳಿದಿರುವುದರಿಂದ ಚುನಾವಣೆಗೆ ಸಂಬಂಧಿಸಿದ ಪೂರ್ವ ತಯಾರಿಯನ್ನು ಆದಷ್ಟು ಬೇಗ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.
ನಗರದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮೂರು ಹಂತದಲ್ಲಿ ತರಬೇತಿ ನೀಡಲಾಗುತ್ತದೆ. ತಾಲೂಕು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ನಡೆಯುತ್ತದೆ. ಉಳಿದ ಎರಡು ತರಬೇತಿಯು ಮತಕ್ಷೇತ್ರದ ಪ್ರಕಾರ ನಡೆಯುತ್ತದೆ ಎಂದರು. ತರಬೇತಿಗೆ ಅವಶ್ಯಕವಿರುವ ಕೊಠಡಿಯನ್ನು ಪರಿಶೀಲಿಸಬೇಕು ಹಾಗೂ ತರಬೇತಿಯಲ್ಲಿ ಪಾಲ್ಗೊಳುವ ತರಬೇತಿದಾರರಿಗೆ ಉಟೋಪೋಚಾರ ಮೂಲಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮತಗಟ್ಟೆಗಳಿಗೆ ಬೇಕಾಗುವ ಪರಿಕಾರಗಳನ್ನು ಸಂಗ್ರಹಿಸಿಡುವ ಸುರಕ್ಷತೆ ನಿಟ್ಟಿನಲ್ಲಿ ಕ್ರಮ ಕೈಗೊಳುವಂತೆ ಹಾಗೂ ಚುನಾವಣೆ ಸಮಯದಲ್ಲಿ ಬೇಕಾಗುವ ವಾಹನಗಳನ್ನು ಮುಂಚಿತವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಚುನಾವಣೆಗೆ ಸಂಬಂಧಿಸಿದ ಸಭೆ ಹಾಗೂ ಕಾರ್ಯಾಗಾರ ಮುಂತಾದವುಗಳ ಮಾಹಿತಿಯನ್ನು ಪ್ರಕಟಣೆಗೆ ನೀಡುವುದು ಮತ್ತು ಅವುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿವಾಗುವಂತೆ ಮಾಡಿ ಪ್ರಕಟಣೆಯಾದ ಸುದ್ದಿಗಳ ಪತ್ರಿಕಾ ತುಣುಕುಗಳನ್ನು ಸಂಗ್ರಹಿಸಿ ಇಡುವುದು ಹಾಗೂ ವೆಬ್‌ಸೈಟ್ ಮತ್ತು ಅಂತರ್ಜಾಲದಲ್ಲಿ ಬರುವ ವಿಡಿಯೋ ತುಣುಕುಗಳನ್ನು ಸಂಗ್ರಹಿಸಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಲ್ಲಿ ಅಂಥವುಗಳನ್ನು ಪರಿಶೀಲನೆ ಮಾಡಿ ಅವುಗಳು ಯಾವ ಹಂತದಲ್ಲಿವೆ ಎಂಬುವುದನ್ನು ಗಮನಿಸಬೇಕು ಹಾಗೂ ಅಂತಹ ದುರುಗಳಿಗೆ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆಗೆ ಸಂಬಂಧಿಸಿದ ಯಾವುದೇ ಗೊಂದಲವಿದ್ದಲ್ಲಿ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಆ ಬಗ್ಗೆ ಕ್ರಮ ವಹಿಸಬೇಕು ಹಾಗೂ ಚುನಾವಣಾ ಆಯೋಗ ಹೊಸ ಹೊಸ ಆದೇಶಗಳನ್ನು ಜಾರಿಗೆ ತರುತ್ತಿದ್ದು, ಅದನ್ನು ಅನುಸರಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.