ಯಲ್ಲಾಪುರ: ಕಾಂಗ್ರೆಸ್ ಪಕ್ಷ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು, ಮನೆ ನಿರ್ವಹಿಸುವ ಮಹಿಳೆಯರ ಸಮಸ್ಯೆಗಳನ್ನು ಹೊರತು ಹಲವಾರು ಯೋಜನೆಗಳನ್ನು ಜಾರಿಗೆ ತರಲು ಹೊರಟಿದೆ. ಆಡಳಿತಕ್ಕೆ ಬಂದ ಕೆಲವೇ ದಿನಗಳಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.
ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈಗಾಗಲೇ ಘೋಷಣೆ ಮಾಡಿರುವ ಪ್ರತಿ ಮನೆ ಗ್ರಹಿಣಿಗೆ ತಿಂಗಳಿಗೆ 2 ಸಾವಿರ ರೂ. ಕುಟುಂಬ ನಿರ್ವಹಣೆಗಾಗಿ ಹಾಗೂ ಪ್ರತಿ ತಿಂಗಳು 200 ಯೂನಿಟ್‌ಗಳಷ್ಟು ಉಚಿತ ವಿದ್ಯುತ್, ಪ್ರತಿ ಕುಟುಂಬಕ್ಕೆ 10 ಕೆಜಿಯಷ್ಟು ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಯನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಜಾರಿಗೆ ತರಲಾಗುತ್ತದೆ. ಈ ಎಲ್ಲ ಯೋಜನೆಗಳನ್ನು ಜಾರಿಗೆ ತರುವುದು ನಿಶ್ಚಿತ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡನ್ನು ಪ್ರತಿ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಜನ ಕಾಂಗ್ರೆಸ್ ಮೇಲೆ ಭರವಸೆ ಇಟ್ಟಿದ್ದಾರೆ. ಅದರಲ್ಲಿಯೂ ಗ್ಯಾರೆಂಟಿ ಕಾರ್ಡ್ ನೀಡುತ್ತಿರುವುದರಿಂದ ಜನರಲ್ಲಿ ಪಕ್ಷದ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ವಿಶ್ವಾಸ ಮೂಡುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವಕರ, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್, ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪೂಜಾ ನೇತ್ರೇಕರ, ಪ.ಪಂ ಮಾಜಿ ಸದಸ್ಯ ಎಂ.ಡಿ.ಮುಲ್ಲಾ, ಪ.ಪಂ ಸದಸ್ಯ ಕೇಸರ್ ಸಯ್ಯದಲಿ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.