• Slide
    Slide
    Slide
    previous arrow
    next arrow
  • ಶಿರಸಿಯ ಸಾಂಸ್ಕೃತಿಕ ಆಸ್ತಿ ‘ಬೇಡರ ವೇಷ’

    300x250 AD

    ಶಿರಸಿಯಲ್ಲಷ್ಟೇ ಆಚರಣೆಯಲ್ಲಿರುವ ಬೇಡರ ವೇಷದ ಸಂಗತಿಗಳನ್ನು ಐತಿಹಾಸಿಕ ದಾಖಲೆಗಳ ಕೊರತೆಯಿಂದಾಗಿ ಕಥೆಯ ಮಟ್ಟದಲ್ಲೇ ನೋಡುವಂತಾಗಿದೆ .
    ಹಿರಿಯರನೇಕರು ತಾವು ಕೇಳಿದ್ದನ್ನು ಹೇಳುತ್ತ ಹೇಳುತ್ತ ಸದ್ಯ ನಮಗೆ ಸಿಗುವ ವಿವರಗಳು ಮೂಲದಿಂದ ಸುಮಾರು ದೂರದಲ್ಲಿರುವ ಸಾಧ್ಯತೆಗಳೇ ಹೆಚ್ಚು.

    ಸೋದೆ ಅರಸರ ಕಾಲ. ಶಿರಸಿ ಅವರ ಆಡಳಿತಕ್ಕೊಳಪಟ್ಟ ಪಟ್ಟಣ. ವ್ಯಾಪಾರ ವ್ಯವಹಾರಗಳಿಗೆ ಆಗಲೇ ತುಂಬಾ ಪ್ರಸಿದ್ಧವಾದ ಸ್ಥಳ. ಒಮ್ಮೆ ಅಲ್ಲಿ ಕಳ್ಳರು, ದರೋಡೆಕೋರರ ಹಾವಳಿ ವಿಪರೀತ ಎಂಬಷ್ಟು ಬೆಳೆಯುತ್ತದೆ. ಜನಸಾಮಾನ್ಯರು, ವ್ಯಾಪಾರಸ್ಥರು ಸೇರಿ ಅರಸರಿಗೆ ದೂರು ನೀಡುತ್ತಾರೆ. ಅರಸರು ಕಳ್ಳರ ನಿಗ್ರಹಕ್ಕೆ ಮಲ್ಲೇಶಿ ಎಂಬ ಯುವಕನ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿ ಕಳಿಸುತ್ತಾರೆ .

    ಮಲ್ಲೇಶಿ ಸುಂದರ ಸದೃಢ ಯುವಕ. ಚಾಣಾಕ್ಷನೂ ಹೌದು. ತನ್ನೆಲ್ಲ ಶಕ್ತಿ ಯುಕ್ತಿಗಳನ್ನು ಬಳಸಿ ಕಳ್ಳಕಾಕರನ್ನೆಲ್ಲ ನಿಗ್ರಹಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗುತ್ತಾನೆ . ಅರಸರಿಂದ , ಜನರಿಂದ ಸನ್ಮಾನಿತನಾಗುತ್ತಾನೆ . ಹೋದಲ್ಲಿ ಬಂದಲ್ಲಿ ಭಯ ಮಿಶ್ರಿತ ಗೌರವಕ್ಕೆ ಪಾತ್ರನಾಗುತ್ತಾನೆ. ತನಗೆ ಸಿಗುತ್ತಿರುವ ಗೌರವ ಆದರಗಳನ್ನು ಕಂಡು ಕ್ರಮೇಣ ಅಹಂಕಾರ ಬೆಳೆಸಿಕೊಳ್ಳುತ್ತಾನೆ. ತಾನೇ ಈ ಭಾಗದ ರಾಜ ಪ್ರತಿನಿಧಿಯೆಂಬಂತೆ ವರ್ತಿಸುತ್ತಾನೆ. ಸಾಮಾನ್ಯರಿಂದ, ವ್ಯಾಪಾರಿಗಳಿಂದ ಅತಿಯಾದ ಮನ್ನಣೆ ನಿರೀಕ್ಷಿಸುತ್ತ ಅದು ಕಮ್ಮಿಯಾಯಿತು ಎಂದು ಅನ್ನಿಸಿದಾಗಲೆಲ್ಲ ಶೋಷಣೆಗೆ ಮುಂದಾಗುತ್ತಾನೆ. ಇವನಿಗಿಂತ ಕಳ್ಳರ ಕಾಟವೇ ವಾಸಿ ಎಂಬ ವಾತಾವರಣ ಸೃಷ್ಟಿಯಾಗುತ್ತದೆ.

    ಜನರ ನಿಯೋಗವೊಂದು ಇವನ ಉಪಟಳದ ಶಮನಕ್ಕೆ ಅರಸನನ್ನು ಭೇಟಿಯಾಗಿ ಅರಿಕೆ ಮಾಡುತ್ತದೆ . ಅರಸನೂ ವಿಷಯದ ಗಂಭೀರತೆಯನ್ನು ಮನಗಂಡು ತಕ್ಷಣ ಅಧಿಕಾರಿಗಳನ್ನು ಕಳಿಸುತ್ತಾನೆ . ಬಲಾಢ್ಯನಾದ ಮಲ್ಲೇಶಿ ಕೆಲದಿನಗಳ ಕಾಲ ಯಾರಿಗೂ ಸಿಗದೇ ತಪ್ಪಿಸಿಕೊಂಡು ವ್ಯವಹರಿಸುತ್ತಾನೆ . ಹಿಡಿಯಲು ಹೋದ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗುತ್ತಾನೆ . ಅವನ ದೌರ್ಬಲ್ಯಗಳನ್ನು ಅರಿತು ಅವನು ತನ್ನ ಪ್ರೇಯಸಿಯ ಮನೆಗೆ ಬರುವಂತೆ ಯೋಜಿಸಿ ಅಲ್ಲಿಯೇ ಅವನನ್ನು ಬಂಧಿಸಲಾಗುತ್ತದೆ.

    ಈ ಘಟನೆ ಇಡೀ ಊರಿನ ಸಂಭ್ರಮವಾಗುತ್ತದೆ. ಅವನನ್ನು ಊರಿನ ಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಬಹು ಧಿಮಾಕಿನಿಂದ ವರ್ತಿಸಿ ಎಲ್ಲರ ಅವಕೃಪೆಗೆ ಪಾತ್ರನಾಗಿದ್ದ ಮಲ್ಲೇಶಿಯನ್ನು ನೋಡಲು ಇಡೀ ಊರು ಸಡಗರದಿಂದ ಸೇರುತ್ತದೆ. ಅವನನ್ನು ಕೆರಳಿಸಿ ಖುಷಿ ಪಡಲು ಹಲಿಗೆ ಬಡಿಯಲಾಗುತ್ತದೆ. ಅವನು ತಪ್ಪಿಸಿಕೊಂಡು ಹೋಗದಂತೆ ಕೈಗಳಿಗೆ ಹಗ್ಗ ಬಿಗಿದು ಎರಡೂ ಕಡೆ ಸಮರ್ಥರು ಹಿಡಿದುಕೊಂಡು ಮೆರವಣಿಗೆ ಸಾಗುವಂತೆ ಏರ್ಪಾಡಾಗಿರುತ್ತದೆ.

    300x250 AD

    ಕಳ್ಳರಿಂದ ರಕ್ಷಿಸಲು ನೇಮಿಸಲ್ಪಟ್ಟವನೇ ಭಕ್ಷಣೆಗೆ ತೊಡಗಿ ಶಿಕ್ಷಿಸಲ್ಪಟ್ಟ ಈ ಕಥೆ ಹೋಳಿ ಹುಣ್ಣಿಮೆಯ ಒಂದೆರಡು ದಿನಗಳ ಆಸು ಪಾಸು ನಡೆದಿರಬಹುದಾದ್ದರಿಂದ ಈ ಆಚರಣೆಗೂ ಹೋಳಿ ಹುಣ್ಣಿಮೆಗೂ ನಂಟು .

    ಶಿರಸಿಯಲ್ಲಿ ಸೋದೆ ಅರಸರ ಕಾಲದಲ್ಲಿ ನಡೆದಿದೆಯೆನ್ನಲಾದ ಈ ಸಂಗತಿಯಿಂದಾಗಿ ಈ ಆಚರಣೆ ಮತ್ತೆಲ್ಲೂ ಕಂಡುಬರುವದಿಲ್ಲ.
    ಈ ವಿವರಣೆಗಳೆಲ್ಲ ಎಲ್ಲೂ ಲಿಖಿತ ರೂಪದಲ್ಲಿ ಲಭ್ಯವಿಲ್ಲದೇ ಇರುವದರಿಂದ ಎಲ್ಲವೂ ಮೌಖಿಕವಾಗಿ ಹರಿದು ಬಂದು ಜನರ ಬಾಯಲ್ಲಿ ಉಳಿದಿರುದರಿಂದ ಇದರ ಸತ್ಯಾಸತ್ಯತೆಗಳು ಪ್ರಶ್ನಾರ್ಹವಾಗಿಯೇ ಉಳಿಯುತ್ತವೆ.

    ವಿಶಿಷ್ಠವಾದ ಮುಖವರ್ಣಿಕೆ, ವೇಷ ಭೂಷಣಗಳು ಜೊತೆಗೆ ಹಲಿಗೆಯ ಶಬ್ದಕ್ಕಗುಣವಾಗಿ ಅಹಂಕಾರ ಪ್ರದರ್ಶನದ ನರ್ತನ, ಸಂಗಡವೇ ಹಗ್ಗ ಹಿಡಿದು ಸಾಗುವವರ ಗಮ್ಮತ್ತು….ಇತ್ಯಾದಿಗಳೆಲ್ಲ ಸೇರಿ ಅದೊಂದು ಹೊಸ ಲೋಕವೇ ಸೃಷ್ಟಿಯಾಗಿ “ಬೇಡರ ವೇಷ”ವೆನ್ನುವದು ಶಿರಸಿಯ ಸಾಂಸ್ಕೃತಿಕ ಆಸ್ತಿಯಾಗಿ ಉಳಿಯುತ್ತದೆ !!

    ವೀಪಿ ಹೆಗಡೆ ವೈಶಾಲಿ
    ಶಿರಸಿ.

    Share This
    300x250 AD
    300x250 AD
    300x250 AD
    Leaderboard Ad
    Back to top