Slide
Slide
Slide
previous arrow
next arrow

ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯ; ಸಿಎಂಗೆ ಕಾಳಿ ಬ್ರಿಗೇಡ್ ಮನವಿ

300x250 AD

ಜೊಯಿಡಾ: ಗಣೇಶಗುಡಿ ಕರ್ನಾಟಕ ವಿದ್ಯುತ ನಿಗಮ ನಿಯಮಿತದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬನಶಂಕರಿ ಎಲೆಕ್ಟ್ರೀಕಲ್, ರಾಯಚೂರು ಎಜೇನ್ಸಿ ಮತ್ತು KPCL ಅಧಿಕಾರಿಗಳು ಹೆಚ್ಚುವರಿ ವೇತನ (ರಿವೈಜ್ ಪೇಮೆಂಟ್), ಇಎಸ್‌ಐ, ಪಿ.ಎಫ್. ಹಾಗೂ ಇತರೆ ಸೌಲಭ್ಯಗಳನ್ನು ನೀಡದೇ ಸತಾಯಿಸುತ್ತಿರುವುದನ್ನು  ವಿರೋಧಿಸಿ ಕಾಳಿ ಬ್ರಿಗೇಡ್ ಸಂಘಟನೆಯ ಮುಖ್ಯ ಸಂಚಾಲಕ ಸುನೀಲ ದೇಸಾಯಿ ಅವರ ನೇತೃತ್ವದಲ್ಲಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
1978-1979 ನೇತೃತ್ವದಲ್ಲಿ ಸಾಲಿನಲ್ಲಿ ಕರ್ನಾಟಕ ವಿದ್ಯುತ ನಿಗಮ ನಿಯಮಿತದವರು ಕಾಳಿ ನದಿಗೆ ಜಲಾಶಯ ನಿರ್ಮಿಸಿ, ತಾಲೂಕಿನ 48 ಸಂಪತ್ಭರಿತ ಗ್ರಾಮಗಳನ್ನು ಸಂಪೂರ್ಣ ಮುಳುಗಡೆ ಮಾಡಿರುತ್ತಾರೆ. ಅದರಲ್ಲಿ ಇನ್ನೂ ಸಾಕಷ್ಟು ಕುಟುಂಬಗಳಿಗೆ ಪರಿಹಾರ ಸಿಕ್ಕಲ್ಲ. ಕೆಲವರು ಪರಿಹಾರಕ್ಕಾಗಿ ಆಗ್ರಹಿಸಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಇದರಿಂದಾಗಿ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಪುನರ್ವಸತಿ ಗ್ರಾಮಗಳಾದ ಜೋಯಿಡಾ ಮತ್ತು ರಾಮನಗರ ಇನ್ನೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹೀಗಿರುವಾಗ ಕೆಪಿಸಿಎಲ್‌ನ ಗಣೇಶಗುಡಿ ಮತ್ತು ಇತರೆಡೆಗಳಲ್ಲಿ ಇಲ್ಲಿನ ಯುವಕರು ಬನಶಂಕರಿ ಎಲೆಕ್ಟ್ರಿಕಲ್, ರಾಯಚೂರು ಎಂಬ ಹೆಸರಿನ ಏಜೇನ್ಸಿ ಅಡಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಳೆದ ಒಂದು ವರ್ಷಕ್ಕಿಂತ ಅಧಿಕ ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಕಾರ್ಮಿಕರ ಇಎಸ್‌ಐ ಮತ್ತು ಪಿ.ಎಫ್.ಗಳನ್ನು ಅವರ ವೇತನದಿಂದ ಕಡಿತಗೊಳಿಸಲಾಗಿದೆ. ಆದರೆ ಅದನ್ನು ಏಜೆನ್ಸಿ ಅವರು ಸಂಬಂಧಪಟ್ಟ ಕಚೇರಿಗೆ ಪಾವತಿಸಿದೇ, ಕಾರ್ಮಿಕರಿಗೆ ಅನ್ಯಾಯ ಮಾಡಿರುತ್ತಾರೆ. ಸರ್ಕಾರ ಗುತ್ತಿಗೆ ಕಾರ್ಮಿಕರಿಗೆ ರಿವೈಜ್ ಪೇಮೆಂಟ್ ನೀಡಬೇಕೆಂದು ಆದೇಶ ಮಾಡಿದ್ದರೂ, ಇನ್ನೂ ವರೆಗೆ ಕಾರ್ಮಿಕರಿಗೆ ಅದನ್ನು ನೀಡದೇ ಮೋಸ ಮಾಡಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಕಳೆದ 12 ದಿನಗಳಿಂದ ಕಾರ್ಮಿಕರು ಗಣೇಶಗುಡಿಯಲ್ಲಿ ಹೋರಾಟ ನಡೆಸಿರುತ್ತಾರೆ. ಆದರೆ ಅವರ ಹೋರಾಟಕ್ಕೆ ಪ್ರತಿಕ್ರಿಯೆ ನೀಡದೇ, ಪ್ರತಿಭಟನೆ ಹತ್ತಿಕ್ಕಲು ಇಲ್ಲಿನ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಗಣೇಶಗುಡಿಯ ಮಾತ್ರವಲ್ಲದೇ ಕದ್ರಾ ಮತ್ತು ಅಂಬಿಕಾನಗರದ ಕಾರ್ಮಿಕರೂ ಇದೇ ರೀತಿ ಹೋರಾಟ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಗುತ್ತಿಗೆ ಕಾರ್ಮಿಕರು ವಿವಿಧ ಹಂತಗಳಲ್ಲಿ ಹೋರಾಟ ನಡೆಸಿರುತ್ತಾರೆ. ಈ ಬಗ್ಗೆ ಕಾರವಾರ ಜಿಲ್ಲಾಧಿಕಾರಿಗಳು ಏಜೆನ್ಸಿ ಮತ್ತು KPCL ಅಧಿಕಾರಿಗಳಿಗೆ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಸೂಚಿಸಿದ್ದು, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಲಿಖಿತವಾಗಿ ಒಪ್ಪಿಕೊಂಡಿದ್ದರೂ, ಅವರು ಇನ್ನೂ ವರೆಗೆ ಸಮಸ್ಯೆ ಬಗೆಹರಿಸಿಲ್ಲ. ಈ ಮಧ್ಯೆ ಬನಶಂಕರಿ ಏಜೆನ್ಸಿ ಅವರನ್ನು ಬಚಾವ್ ಮಾಡುವ ಪ್ರಯತ್ನ ಅಧಿಕಾರಿಗಳು ಮಾಡುತ್ತಿದ್ದು, ಮೂರು ತಿಂಗಳಿಗಾಗಿ ಹೊಸ ಟೆಂಡರ್ ಕರೆದು ಬೇರೆ ಏಜೆನ್ಸಿಯಿಂದ ಗುತ್ತಿಗೆ ಕಾರ್ಮಿಕರನ್ನು ಪಡೆಯುವ ಪ್ರಯತ್ನ ನಡೆದಿದೆ. ಈ ಬಗ್ಗೆ ಟೆಂಡರ್ ಕೂಡಾ ಕರೆಯಲಾಗಿದೆ. ಒಟ್ಟಾರೆ ಇಲ್ಲಿನ ಕಾರ್ಮಿಕರಿಗೆ ಅನ್ಯಾಯ ಮಾಡಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಇದನ್ನೆಲ್ಲಾ ವಿರೋಧಿಸಿ ಕಾಳಿ ಬ್ರಿಗೇಡ್ ಸಂಘಟನೆ ಮತ್ತು ಗುತ್ತಿಗೆ ಕಾರ್ಮಿಕ ಸಂಘಟನೆ ಸೇರಿ ಮನವಿ ಸಲ್ಲಿಸಿದರು.
ತಹಶೀಲ್ದಾರರು ಈ ಬಗ್ಗೆ ಕಾಳಿ ಬ್ರಿಗೇಡ್ ಕಾರ್ಯಕರ್ತರು ಮತ್ತು ಗುತ್ತಿಗೆ ಕಾರ್ಮಿಕರ ಸಂಘಟನೆಯೊಂದಿಗೆ ತುರ್ತು ಸಭೆ ಮಾಡಿ, ಈ ಹಿಂದೆ ಕೂಡಾ ಹೋರಾಟಗಾರರು ತಮಗೆ ಸಲ್ಲಿಸಿದ ಮನವಿ ಮತ್ತು ಈ ಬಗ್ಗೆ ತಹಶೀಲ್ದಾರ ಕಚೇರಿಯಿಂದ ಬನಶಂಕರಿ ಏಜೆನ್ಸಿಗೆ ನೀಡಿದ ನೋಟಿಸ್‌ನ ಫೈಲ್ ತರಿಸಿ ನೋಡಲಾಗಿ, ನೋಟಿಸ್‌ಗೆ ಬನಶಂಕರಿ ಏಜೆನ್ಸಿ ಅವರು ಉತ್ತರ ನೀಡಿದ್ದು, ಕಾರ್ಮಿಕರ ಸಮಸ್ಯೆ ಒಂದು ತಿಂಗಳ ಒಳಗಾಗಿ ಬಗೆಹರಿಸುವುದಾಗಿ ಲಿಖಿತವಾಗಿ ಒಪ್ಪಿಕೊಂಡಿದ್ದರು. ಆದರೆ ಈ ಬಗ್ಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿ ಸ್ಪಷ್ಟವಾಯಿತು. ಈ ಬಗ್ಗೆ ತಹಶೀಲ್ದಾರರು ಮುಂದಿನ ಕ್ರಮ ಕೈಗೊಳ್ಳುವ ಕುರಿತು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಳಿ ಬ್ರೀಗೆಡ್ ಸಂಘಟನೆಯ ಮುಖ್ಯ ಸಂಚಾಲಕರಾದ ಸುನೀಲ ದೇಸಾಯಿ ಮತ್ತು ಮುಖ್ಯ ಸಮಿತಿಯ ಮಾಜಿ ಅಧ್ಯಕ್ಷರಾದ ಸತೀಶ ನಾಯ್ಕ, ಕಾರ್ಯದರ್ಶಿ ಸಮೀರ್ ಮುಜಾವರ, ಪ್ರಭಾಕರ ನಾಯ್ಕ, ನಾರಾಯಣ ಹೆಬ್ಬಾರ್, ವಿನಾಯಕ ಕರಂಜೋಳಕರ, ಬಸವಣ್ಣಯ್ಯ ಹಿರೇಮಠ, ಸೀಮಾವ ವೇಗಸ್, ಓಂಕಾರ ಟೇಂಗ್ಸೇ, ದಿನೇಶ ದೇಸಾಯಿ, ಭವಾನಿ ಚೌಹಾಣ್, ಕವಿತಾ ರೇವಣಕರ, ಸೋನಿಯಾ ಘೋಟ್ಗೆ, ದೇವಿದಾಸ ವೇಳಿಪ, ಅವಿನಾಶ, ಕೃಷ್ಣಾ ದೇಸಾಯಿ, ಈಶ್ವರಿ ದೇಸಾಯಿ, ರಮೇಶ್, ಮನೋಜ್, ಮಂಜುನಾಥ ಕೆ, ಸಂತೋಷ ಡಿ., ಮಂಜುನಾಥ ಎ, ಗೋಕುಲದಾಸ್ ನಾಯ್ಕ,  ಮುಂತಾದ ಕಾಳಿ ಬ್ರೀಗೆಡ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top