ಹೊನ್ನಾವರ: ಪಟ್ಟಣದ ಬಂದರು ಪ್ರದೇಶದಲ್ಲಿ ತಾಲೂಕಿನ ಎಲ್ಲರಿಗೂ ಈ ಹಿಂದಿನಂತೆಯೆ ಮೀನು ಮಾರಾಟಕ್ಕೆ ಅವಕಾಶ ನೀಡಬೇಕೆಂದು ನೂರಾರು ಸಂಖ್ಯೆಯ ಮೀನುಗಾರರು ತಹಶೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ತಾಲೂಕಿನ ವಿವಿಧಡೆಯಿಂದ ಮೀನುಗಾರರು ಹಲವು ವರ್ಷದಿಂದ ಮೀನು ಮಾರಾಟ ನಡೆಸುತ್ತಿದ್ದರು. ಎರಡು ದಿನದಿಂದ ಪಟ್ಟಣದ ಮೀನುಗಾರರು ಮಾತ್ರ ಮಾರಾಟ ಮಾಡಬೇಕು. ತಾಲೂಕಿನ ಮಂಕಿ ಕರ್ಕಿ, ಹಳದೀಪುರದಿಂದ ಆಗಮಿಸುವರಿಗೆ ಮೀನು ಮಾರಾಟಕ್ಕೆ ಅವಕಾಶ ಇಲ್ಲ ಎಂದು ಮೀನುಗಾರರ ಮಧ್ಯೆ ಪರಸ್ಪರ ಜಗಳ ಸಂಭವಿಸುತ್ತಿತ್ತು.
ಈ ಸಮಸ್ಯೆ ಬಗೆಹರಿಸುವಂತೆ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರರಿಗೆ, ಪ.ಪಂ. ಮುಖ್ಯಾಧಿಕಾರಿಗೆ ಮೀನುಗಾರರು ತಮಗೂ ಅವಕಾಶ ಕಲ್ಪಿಸುವ ಜೊತೆ ರಕ್ಷಣೆ ನೀಡಬೇಕು ಎಂದು ಮನವಿ ಸಲ್ಲಿಸಿದರು. ಸಾಂಪ್ರದಾಯಿಕವಾಗಿ ಹಲವು ವರ್ಷದಿಂದ ಮೀನು ಮಾರಾಟ ಮಾಡುತ್ತಿದ್ದು, ನೊಂದಾಯಿಸಲ್ಪಟ್ಟ ಸಂಘದ ಸದಸ್ಯರಾಗಿದ್ದು, ನಮ್ಮದೇ ತಾಲೂಕ ಕೇಂದ್ರದಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು. ಇದು ನಮ್ಮ ಸಂವಿಧಾನಾತ್ಮಕ ಹಕ್ಕಾಗಿದ್ದು, ನಾವು ಕೇಳುತ್ತಿದ್ದೇವೆ. ಆದರೆ ಏಕಾಏಕಿ ಪಟ್ಟಣದವರು ಹೊರತಾಗಿ ಮಾರಾಟ ಮಾಡಲು ಅನುಮತಿ ನೀಡುತ್ತಿಲ್ಲ ಎನ್ನುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದಿನಂತೆಯೇ ಎಲ್ಲರಿಗೂ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.
ಮಂಕಿ ಸಾಂಪ್ರದಾಯಿಕ ಮೀನುಗಾರ ಸಂಘದ ಅಣ್ಣಪ್ಪ ಖಾರ್ವಿ ಮಾತನಾಡಿ, ಹಲವು ವರ್ಷದಿಂದ ಮಾರಾಟ ಮಾಡುತ್ತಿದ್ದು, ಏಕಾಏಕಿ ಮಾರಾಟ ಮಾಡಲು ಅವಕಾಶ ಇಲ್ಲ ಎಂದರೆ ಹೇಗೆ. ನಾವೇನು ವಿದೇಶಿಗರಲ್ಲ. ಇದೇ ತಾಲೂಕಿನವರಾದರೂ ನಮ್ಮ ಮೇಲೆ ದೌಜನ್ಯ ನಡೆಯುತ್ತಿದೆ. ಸಾಲ ಮಾಡಿ ದೋಣಿ ಖರೀದಿ ಮಾಡಿ ಕಂಗಾಲಾಗಿದ್ದೇವೆ. ನ್ಯಾಯಕ್ಕಾಗಿ ಅಧಿಕಾರಿಗಳಿಗೆ ಜನಪ್ರತಿನಿಧಿಗೆ ಮೊರೆ ಬಂದಿದ್ದೇವೆ.
ಸಂಘಟನೆಯ ಕಾರ್ಯದರ್ಶಿ ನಾಗರಾಜ ಖಾರ್ವಿ ಮಾತನಾಡಿ, ಮೀನುಗಾರಿಕೆ ಕುಲಕಸಬಾಗಿದೆ. ಇದೇ ಸ್ಥಳದಲ್ಲಿ ಈ ಹಿಂದಿನಿಂದಲೂ ಮಾರಾಟ ಮಾಡುತ್ತಿದ್ದೇವು. ಇದೀಗ ಮಾರಟ ಮಾಡಲು ತಂದ ಮೀನನ್ನು ಹೊಳೆಗೆ ಎಸೆದು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದಾರೆ. ಈ ಸಂಬಧ ಅಧಿಕಾರಿಗೆ ಮನವಿ ಮೂಲಕ ಮಾಹಿತಿ ನೀಡಲಾಗಿದೆ ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ಅಲ್ಲಿಯವರೆಗೆ ಮಾರಾಟಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ ರವಿರಾಜ್ ದಿಕ್ಷಿತ್, ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಂಕಿ, ಕರ್ಕಿ, ಹಳದೀಪುರ ಭಾಗದ ನೂರಾರು ಸಂಖ್ಯೆಯ ಮೀನುಗಾರರು ಬೋಟ ಮಾಲಕರು, ಹಾಜರಿದ್ದರು.