Slide
Slide
Slide
previous arrow
next arrow

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವಾರು ಉಪಯೋಗಕಾರಿ ಅಂಶಗಳಿವೆ: ಸಂತೋಷಕುಮಾರ್ ಮೆಹಂದಳೆ

300x250 AD

ಹಳಿಯಾಳ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹಲವಾರು ಉಪಯೋಗಕಾರಿ ಅಂಶಗಳಿದ್ದು, ಅವುಗಳು ಕಾರ್ಯರೂಪದಲ್ಲಿ ಬಂದರೆ ಪಾಶ್ಚಿಮಾತ್ಯ ದೇಶಗಳ ಶಿಕ್ಷಣ ನೀತಿಗೆ ಸೆಡ್ಡು ಹೊಡೆಯಬಹುದು ಎಂದು ಪಟ್ಟಣದಲ್ಲಿ ನಡೆದ 9ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಸಂತೋಷಕುಮಾರ ಮೆಹಂದಳೆ ಹೇಳಿದರು.
ದಿ.ಚಂದ್ರಕಾಂತ ಅಂಗಡಿ ಮುಖ್ಯ ವೇದಿಕೆಯಲ್ಲಿ ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದ ಅವವರು, ಸಾಹಿತ್ಯ ಎನ್ನುವುದು ದೇವರ ಭಾಷೆ. ಸಾಹಿತ್ಯವನ್ನು ಗುರುತಿಸಬೇಕಾದರೆ ಸಾಕಷ್ಟು ಸಾಹಿತ್ಯ ಮತ್ತು ಕವನ ಸಂಕಲನಗಳ ಉಳುಮೆ ಮಾಡಬೇಕಾಗಿರುತ್ತದೆ. ಬರಹ ಒದುಗರನ್ನು ಆವರಿಸಿಕೊಂಡರೆ ಬರಹಗಾರನಾಗುತ್ತಾನೆ. ಪುಸ್ತಕ ಕೊಟ್ಟರೆ, ಓದಿನಲ್ಲಿ ಮಗ್ನನಾದರೆ ಓದುಗನಾಗುತ್ತಾನೆ. ಓದುಗನನ್ನು ಹಿಡಿದಿಟ್ಟುಕೊಳ್ಳುವಂತಹ ಬರಹಗಾರನಾಗಬೇಕು. ಯಾವುದೇ ಭಾಷೆಗಳನ್ನು ಕಲಿತಿದ್ದರು ಕೂಡ ವಿಷಯದ ಚಿಂತನೆಗಳು ಕನ್ನಡದಲ್ಲಿಯೇ ಮಾಡಬೇಕು ಎಂದು ಅಭಿಪ್ರಾಯಿಸಿದರು.
ಬರಹ ಕಟ್ಟಿಕೊಡುವುದು ಸುಲಭವಲ್ಲ, ಬರೆದಿರುವ ವಿಷಯದ ಆಯ್ಕೆ ಮುಖ್ಯವಾಗಿರುತ್ತದೆ. ಕೇವಲ ಬರೆಯುವುದು ಮುಖ್ಯವಲ್ಲ, ಬರೆದಂತೆ ಆಚರಣೆಯಲ್ಲಿ ಇರುವುದು ತುಂಬಾ ಮುಖ್ಯವಾಗಿದೆ. ನಿಜವಾಗಿಯೂ ಓದಬಲ್ಲ ವಿಷಯ ವಸ್ತುವಿನ ಆಧಾರವನ್ನು ಬರವಣಿಗೆಯಲ್ಲಿ ಪುಸ್ತಕದ ರೂಪದಲ್ಲಿ ತರಲು ಇಚ್ಛಿಸಿದಲ್ಲಿ ಎಲ್ಲ ಸಹಕಾರ ನೀಡುವುದಾಗಿ ಘೋಷಿಸಿದರು.
ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಕಲೆ, ಸಾಹಿತ್ಯ, ಕ್ರೀಡೆ ಜನಜೀವನದಲ್ಲಿ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹಳಿಯಾಳ ಕ್ಷೇತ್ರವು ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಪಡೆದಿದೆ. ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಕ್ರೀಯಾಶೀಲರಾಗಿ ನಮ್ಮ ತಾಲೂಕುಗಳಲ್ಲಿ ಬಹಳಷ್ಟು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿದ್ದಾರೆ. ಕರ್ನಾಟಕವು ಪ್ರಗತಿಪರ ರಾಜ್ಯವೆಂದು ಜಗತ್ತಿನಲ್ಲೇ ಪ್ರಸಿದ್ಧವಾಗಿದ್ದು, ಕರ್ನಾಟಕದಂತಹ ಮಾನವೀಯ ನೆಲೆಗಟ್ಟಿನ ರಾಜ್ಯ ಮತ್ತೊಂದಿಲ್ಲ ಎನ್ನುವ ಪ್ರತೀತಿ ಇಡೀ ದೇಶದಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.
ದಾAಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ.ವಿನಯಾ ಒಕ್ಕುಂದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಕನ್ನಡ ಎನ್ನುವುದು ಒಂದೇ ಅಲ್ಲ, ಹಲವಾರು ಆಯಾಮದ ಕನ್ನಡವಿದೆ. ನಮ್ಮ ಕನ್ನಡವು ಸಿದ್ದಿ, ಕೊಂಕಣಿ, ಲಮಾನಿ, ಮರಾಠಿ, ಗೌಳಿಗರ ಕನ್ನಡ ಸಮ್ಮಿಳಿತವಾಗಿದೆ. ಗಿರಿಶ ಕಾರ್ನಾಡ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ ಬೇಂದ್ರೆ, ಡಿವಿಡಿ ಇವರನ್ನೆಲ್ಲಾ ಕನ್ನಡಿಗರು ಅಲ್ಲ ಎನ್ನಲು ಸಾಧ್ಯವೇ ಇಲ್ಲ. ಕಾರಣ ಅಷ್ಟೊಂದು ಕನ್ನಡಕ್ಕೆ ಅವರ ಕೊಡುಗೆ ಇದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಕನ್ನಡ ಸಾಹಿತ್ಯ ಸೇವೆಗೆ ಅವಕಾಶ ಒದಗಿ ಬಂದಿರುವುದು ನನ್ನ ಭಾಗ್ಯ. ಕನ್ನಡ ಸಾಹಿತ್ಯದ ಅನುದಿನ ಅನುಪಮ ನಿರಂತರ ಕಾರ್ಯಕ್ರಮ ಮಾಡುವುದರ ಮೂಲಕ ಅನುಪಮ ಸೇವೆಗೆ ಮಾಡಲಾಗುತ್ತಿದೆ. ಇದುವರೆಗೆ 35 ಪಂಪ ಪ್ರಶಸ್ತಿ ವಿತರಣೆ ಆಗಿದ್ದರೂ ನಮ್ಮ ಜಿಲ್ಲೆಗೆ ಇದುವರೆಗೂ ಒಂದು ಪ್ರಶಸ್ತಿಯು ಸಿಕ್ಕಿಲ್ಲ. ಈ ಪ್ರಶಸ್ತಿ ಜಿಲ್ಲೆಗೆ ತರುವಲ್ಲಿ ಶಾಸಕರು ಪ್ರಯತ್ನಿಸಬೇಕೆಂದು ಶಾಸಕ ದೇಶಪಾಂಡೆ ಅವರಲ್ಲಿ ಆಗ್ರಹಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಮ್ಮೇಳನಾಧ್ಯಕ್ಷ ಸಂತೋಷಕುಮಾರ ಮೆಹಂದಳೆ ಅವರು ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು. ಮುಖ್ಯಬೀದಿ ಮೂಲಕ ಮರಾಠಾ ಭವನಕ್ಕೆ ಮೆರವಣಿಗೆ ಸಾಗಿತು. ಬಳಿಕ ತಹಶೀಲ್ದಾರ್ ಪ್ರಕಾಶ ಗಾಯಕವಾಡ, ಕಸಾಪ ಹಳಿಯಾಳ ಅಧ್ಯಕ್ಷೆ ಸುಮಂಗಲಾ ಅಂಗಡಿ ಅವರು ಧ್ವಜಾರೋಹಣ ನೇರವೆರಿಸಿದರು. ವೇದಿಕೆಯಲ್ಲಿ ನಿಟಕಪೂರ್ವ ಸಮ್ಮೇಳನಾಧ್ಯಕ್ಷ ಮನೋಹರ ಜನ್ನು ಅವರಿಂದ ಸಂತೋಷಕುಮಾರ ಮೆಹಂದಳೆ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಲಾಯಿತು.
ಶಿಕ್ಷಕ ಕಾಳಿದಾಸ ಬಡಿಗೇರ ಅವರು ಬರೆದಿರುವ ಒಳಿತೆ ಜಗದೊಡೆಯ (ವೈಚಾರಿಕ ಚಿಂತನ) ಹಾಗೂ ಹಳಿಯಾಳ ಕಾವ್ಯ ಮಾಲಿಕೆ(ಕವನ ಸಂಕಲನ) ಪುಸ್ತಕವನ್ನು ಶಾಸಕ ದೇಶಪಾಂಡೆ ಅವರು ಬಿಡುಗಡೆ ಮಾಡಿದರು. ಚಿಂತನ ಮಂಥನ, ಕವಿ ಸಮಯ, ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೇದಿಕೆಯಲ್ಲಿ ವಿ.ಪ. ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ, ಪ್ರಮುಖರಾದ ಅಜರುದ್ದೀನ್ ಬಸರಿಕಟ್ಟಿ, ಉಡಚಪ್ಪ ಬೊಬಾಟಿ, ತಾಲೂಕಾಡಳಿತದ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು, ಕಸಾಪ ಹಾಗೂ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

300x250 AD
Share This
300x250 AD
300x250 AD
300x250 AD
Back to top