ಅಂಕೋಲಾ: ಹೋಳಿ ಹುಣ್ಣಿಮೆ ಹತ್ತಿರ ಬರುತ್ತಿದೆಯೆಂದರೆ ಅಂಕೋಲಾ ತಾಲೂಕಿನಲ್ಲಿ ಸುಗ್ಗಿಯ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ತಾಲೂಕಿನಲ್ಲೀಗ 21 ವರ್ಷದ ಬಳಿಕ ಅಲಗೇರಿ ಕ್ಷತ್ರೀಯ ಕೋಮಾರಪಂಥ ಸಮಾಜದವರ ಸುಗ್ಗಿ ಕುಣಿತ ಆರಂಭವಾಗಿದೆ.
ತಾಲೂಕಿನ ಅಲಗೇರಿಯ ಕ್ಷತ್ರೀಯ ಕೋಮಾರಪಂಥ ಸಮಾಜದ ಸುಗ್ಗಿ ಮೇಳ ಸುಮಾರು 45 ತುರಾಯಿಗಳನ್ನು ಮತ್ತು 100ಕ್ಕೂ ಹೆಚ್ಚು ಕೋಲಾಟಗಾರರನ್ನು ಹೊಂದಿರುವ ಈ ತಂಡದಲ್ಲಿ ವಾದ್ಯ, ವೇಷ, ಹಾಡುಗಾರರು ಹೀಗೆ 150ಕ್ಕೂ ಹೆಚ್ಚು ಜನರು ಪಾಲ್ಗೊಂಡು ತಮ್ಮ ತಿರುಗಾಟವನ್ನು ನಡೆಸಿದ್ದಾರೆ. ಅಲಗೇರಿ ಶ್ರೀ ಹೋಲವೇಟರ ಮತ್ತು ಸಣ್ಣಮ್ಮ ದೇವಸ್ಥಾನದಿಂದ ಆರಂಭಗೊಂಡು ಪಟ್ಟಣದ ಶ್ರೀಶಾಂತಾದುರ್ಗಾ, ಶ್ರೀವೆಂಕಟರಮಣ, ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳದಲ್ಲಿ ಸಮಾಜದ ಮುಖಂಡರ ಮನೆಗಳಲ್ಲಿ ಸುಗ್ಗಿ ಕುಣಿತ ನಡೆಸಿದ್ದಾರೆ.
ಭಾರತ ಸ್ವತಂತ್ರವಾದ ನಂತರದ ಕೆಲವು ವರ್ಷಗಳ ನಂತರ ಈ ಭಾಗಗಳ ಕೋಮಾರಪಂಥ ಸಮಾಜದ ಕೆಲವು ಪ್ರಮುಖರು ಈ ಸುಗ್ಗಿ ಮೇಳವನ್ನು ನಡೆಸಿಕೊಂಡು ಬಂದಿದ್ದರೆಂಬ ಪ್ರತೀತಿ ಇದೆ. ಸುಗ್ಗಿ ಆಡುವದರಿಂದ ಊರೂರು ಸುತ್ತಿ ಊರು ಕೇರಿಗಳ ರೋಗರುಜಿನ ದೈವ ಪೀಡೆಗಳನ್ನು ಒಯ್ದು ಕರಿದೇವರಿಗೆ ಅರ್ಪಿಸಿದರೆ ಜನರಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿಂದಲೂ ಸುಗ್ಗಿ ಕುಣಿತವನ್ನು ಆಡಲಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಈ ಭಾರಿ ಹೋಳಿ ಹಬ್ಬದ ಸಂಭ್ರಮದ ಸಮಯದಲ್ಲಿ ಕ್ಷತ್ರೀಯ ಕೋಮಾರಪಂಥ ಸಮಾಜದ ಸುಗ್ಗಿಯು ಆಕರ್ಷಣೀಯವಾಗಿ ಕಂಡು ಬಂದಿದೆ.