ಕಾರವಾರ: ಸಂಪನ್ಮೂಲ ವ್ಯಕ್ತಿಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿ, ತನ್ಮೂಲಕ ವೃತ್ತಿ ತರಬೇತಿಗಳಲ್ಲಿ ಹೊಸ ಆಯಾಮ ಕಂಡುಕೊಳ್ಳುವುದು, ಯಾವುದೇ ಒಂದು ಕ್ರಿಯಾಶೀಲ ಸಂಸ್ಥೆಯ ಪ್ರಮುಖ ಕೆಲಸ ಆಗಿರುತ್ತದೆ. ಅದನ್ನು ಜನಶಿಕ್ಷಣ ಸಂಸ್ಥೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಿ ಶ್ಲಾಘನೀಯ ಕೆಲಸ ಮಾಡಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ ಹೇಳಿದರು.
ಅವರು ಜನಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಕೋಡಿಬೀರ ದೇವಸ್ಥಾನದ ಸಭಾಭವನದಲ್ಲಿ ಒಂದು ದಿನದ ಸಂಪನ್ಮೂಲ ವ್ಯಕ್ತಿಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳು ತಮ್ಮ ಸಾಮರ್ಥ್ಯ ಅಭಿವೃದ್ಧಿಪಡಿಸಲು ಇಂತಹ ತರಬೇತಿಯ ಸಂಪೂರ್ಣ ಪ್ರಯೋಜನ ಪಡೆಯಬೇಕು ಮಾತ್ರವಲ್ಲ ತಾವು ನೀಡುವ ತರಬೇತಿಯಲ್ಲಿ ಇದನ್ನು ಅಳವಡಿಸಿಕೊಂಡು ಶಿಬಿರಾರ್ಥಿಗಳ ವೃತ್ತಿ ಜೀವನಕ್ಕೆ ಹೊಸ ಚಾಲನೆ ನೀಡಬೇಕೆಂದರು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉದ್ದಿಮೆದಾರ ಚಂದ್ರಶೇಖರ ಪಟಗಾರ ಮಾತನಾಡಿ, ಸ್ವಾವಲಂಬಿ ಜೀವನ ನಡೆಸುವಲ್ಲಿ ಇರುವ ಖುಷಿ ಹಾಗೂ ಗಂಭೀರತೆ ಅರ್ಥ ಮಾಡಿಕೊಂಡರೆ ಸ್ವಾಭಿಮಾನದ ಬದುಕು ಕಂಡುಕೊಳ್ಳಬಹುದು ಎಂದರು. ಅಲ್ಲದೇ ಅವರು ತಮ್ಮ ಗಾರ್ಮೆಂಟ್ ಯುನಿಟ್‌ನ ಕುರಿತಾಗಿ ವಿವರವಾಗಿ ತಿಳಿಸಿದರು.
ಜನಶಿಕ್ಷಣ ಸಂಸ್ಥೆಯ ಚೇರಮನ್ ಕಿಶೋರ ರಾಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ತರಬೇತಿ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳಾದ ತಾವು ಸಾಮರ್ಥ್ಯಾಭಿವೃದ್ದಿ ತರಬೇತಿ ಪಡೆದು ತಮ್ಮ ತರಬೇತಿಯಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಿಡಾಕ್‌ನ ಉಪನಿರ್ದೇಶಕ ಶಿವಾನಂದ ಯಲಿಗಾರ, ಯೋಜನಾ ವರದಿ ತಯಾರಿಕೆ ಹಾಗೂ ಪ್ರೇರಣೆ ಕುರಿತು ತರಬೇತಿ ನೀಡಿದರು. ಜನಶಿಕ್ಷಣ ಸಂಸ್ಥೆಯ ಹಿರಿಯ ಅಧಿಕಾರಿ ರಮೇಶ ಭಂಡಾರಿ ಅವರು ಜನಶಿಕ್ಷಣ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳ ಜವಾಬ್ದಾರಿ ಹಾಗೂ ಕಾಗದ ಪತ್ರಗಳ ನಿರ್ವಹಣೆ ಕುರಿತು ತಿಳಿಸಿದರು. ಜನಶಿಕ್ಷಣ ಸಂಸ್ಥಾನದ ನಿರ್ದೇಶಕರಾದ ಶಶಿಕಾಂತ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿ ಜನಶಿಕ್ಷಣ ಸಂಸ್ಥೆಯ ರೂಪುರೇಶೆಗಳನ್ನು ತಿಳಿಸಿದರು. ಕಾರ್ಯಕ್ರಮಾಧಿಕಾರಿ ಪ್ರಕಾಶ ತಳೇಕರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.