ಶಿರಸಿ: ಇತ್ತೀಚಿಗೆ ಅಜಿತ ಮನೋಚೇತನಾ ಸಂಸ್ಥೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಕ್ಯಾನ್ಸರ್ ತಜ್ಞೆ ಹಾಗೂ ಬೆಂಗಳೂರು ಅಬಲಾಶ್ರಮದ ಅಧ್ಯಕ್ಷೆ ಡಾ.ವಿಜಯಲಕ್ಷ್ಮಿ ದೇಶಮಾನೆ ಸಮಾರೋಪ ಭಾಷಣ ಮಾಡಿದರು. ಡಾ.ಶ್ರೀನಿವಾಸ ಕುಲಕರ್ಣಿ ಅವರಿಗೆ ಸನ್ಮಾನ ಮಾಡಿದರು. ನಾಡಿನ ಹೆಮ್ಮೆಯ ಸೇವಾ ಸಂಸ್ಥೆ ಅಜಿತ ಮನೋಚೇತನಾ ಎಂದು ಡಾ.ದೇಶಮಾನೆ ಶ್ಲಾಘನೆ ವ್ಯಕ್ತಮಾಡಿದರು.
16 ವರ್ಷಗಳಿಂದ ಪ್ರತಿ ತಿಂಗಳು ಮಾನಸಿಕ ಆರೋಗ್ಯ ಶಿಬಿರದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಶ್ರೀನಿವಾಸ ಕುಲಕರ್ಣಿ, ಶಿರಸಿಯ ಜನರಲ್ಲಿ ಆರೋಗ್ಯ ಪ್ರಜ್ಞೆ ಇದೆ. ಮನೆಯ ಹಿರಿಯರನ್ನು ಪ್ರೀತಿಯಿಂದ ಕಾಣಿರಿ, ವಿಶೇಷ ಮಕ್ಕಳ ಆರೋಗ್ಯದ ಬಗ್ಗೆ ನಿಷ್ಕಾಳಜಿ ಮಾಡಬೇಡಿ. ಮಾನಸಿಕ ಆರೋಗ್ಯ ಸೇವೆ ನೀಡುತ್ತಿರುವ ಅಜಿತ ಮನೋಚೇತನಾ ದುಶ್ಚಟ ನಿವಾರಣಾ ಕೇಂದ್ರವನ್ನು ಶುರುಮಾಡುವ ಬಗ್ಗೆ ಪ್ರಯತ್ನ ನಡೆಸೋಣ ಎಂದು ಹಾರೈಸಿದರು. ಆರೋಗ್ಯ ಶಿಬಿರ ವ್ಯವಸ್ಥಾ ಸಹಾಯಕಿಯಾಗಿ ನರ್ಮದಾ ಹೆಗಡೆ ಅವರ ನಿರಂತರ ಸೇವೆ ಯನ್ನು ಡಾ.ಕುಲಕರ್ಣಿ ಶ್ಲಾಘಿಸಿದರು.
ಸಮಾರೋಪ ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ದೇವರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ, ಆಯುಷ್ ಅಧಿಕಾರಿ ಡಾ.ಜಗದೀಶ ಯಾಜಿ, ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿ ದತ್ತಾತ್ರೇಯ ಭಟ್ ಭಾಗಿಯಾಗಿ ಶುಭ ಹಾರೈಸಿದರು. ಅಜಿತ ಮನೋಚೇತನಾ ವಿಕಾಸ ಶಾಲೆಯ ಶಿಕ್ಷಕರು, ಸಿಬ್ಬಂದಿಗಳಿಗೆ ಅಭಿನಂದನೆ ನೀಡಿ ಮಾತನಾಡಿದ ಮುಖ್ಯ ಅತಿಥಿ ಶಿಕ್ಷಣತಜ್ಞೆ ಉಷಾ ಬೆಟಗೇರಿ, ಭಗವಂತ ನೀಡಿರುವ ಅಪರೂಪದ ಅವಕಾಶ ಎಂದು ತಿಳಿದು ವಿಕಲಚೇತನ ಶಾಲೆಯ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಬುದ್ಧಿಮಾಂದ್ಯ ಮಕ್ಕಳ ಪಾಲಕರು ಈ ಮಕ್ಕಳ ಕಡೆ ಸದಾ ಗಮನ ಕಾಳಜಿ ತೋರಿಸಬೇಕು ಎಂದು ಕರೆನೀಡಿದರು.
ವಿಕಾಸ ವಿಶೇಷ ಶಿಕ್ಷಣ ಶಾಲೆಯಲ್ಲಿ 10 ವರ್ಷ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಶಶಿಕಲಾ ಅವರನ್ನು, ಸ್ಪೆಶಲ್ ಓಲಿಂಪಿಕ್ಸ್ನಲ್ಲಿ ಭಾಗಿ ಆಗಿರುವ ವಿಶೇಷ ವಿದ್ಯಾರ್ಥಿ ಸಾಲ್ವಿನ್, ವಿಕಾಸ ಶಾಲೆಯ ವಿದ್ಯಾರ್ಥಿ, ಇದೀಗ ಊದಬತ್ತಿವಿನಾಯಕ ಎಂದೇ ಹೆಸರು ಪಡೆದ ವಿನಾಯಕ, ಸರ್ಕಾರಿ ಸೌಲಭ್ಯ ನೀಡುವ ಗ್ರಾಮವನ್ ಶಿಬಿರಗಳನ್ನು ಅಜಿತ ಮನೋಚೇತನಾದಲ್ಲಿ ನಡೆಸಿಕೊಟ್ಟ ಅನ್ನಪೂರ್ಣ, ಸೋಲಾರ್ ದೀಪ ನೀಡಿದ ಸೆಲ್ಕೋ ಸಂಸ್ಥೆಯವರನ್ನು ಅಜಿತ ಮನೋಚೇತನಾ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಅವರು ಅಭಿನಂದಿಸಿದರು. ಈ ವರ್ಷ ರಾಜ್ಯದ ಉತ್ತಮ ಅಂಗವಿಕಲರ ಸೇವಾ ಸಂಸ್ಥೆ ಎಂಬ ಪ್ರಶಸ್ತಿ ಪಡೆದ ಸಾಗರದ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶಾಂತಲಾ ಸುರೇಶ ಅವರಿಗೆ ಅಭಿನಂದನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್ ಉತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೆ ಧನ್ಯವಾದ ನೀಡಿದರು. ಗೀತಾ ಗೌಡ ಅವರು ಹಾಗೂ ವಿನಾಯಕ ಭಟ್ ಅವರು ನಿರ್ವಹಣೆ ಮಾಡಿದರು.
ಸಮಾರೋಪಕ್ಕೂ ಮೊದಲು ನಡೆದ ವಿಶೇಷ ಗೋಷ್ಠಿಯಲ್ಲಿ ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಶಿರಸಿಯ ಮಹಿಳಾ ಸಂಘ- ಸಂಸ್ಥೆಗಳ ಜೊತೆ ಸಂವಾದ ನಡೆಸಿದರು. ಹಸಿರು ಅಡುಗೆ ಮನೆ, ಕೈತೋಟ, ಮಕ್ಕಳ ಆರೋಗ್ಯ ಕುರಿತು ಸಂಘಟಿತ, ರಚನಾತ್ಮಕ ಪುಟ್ಟಪುಟ್ಟ ಕಾರ್ಯ ಕೈಗೊಳ್ಳಲು ಕರೆ ನೀಡಿದರು. ವಾಸಂತಿ ಹೆಗಡೆ, ಶ್ರೀದೇವಿ ದೇಶಪಾಂಡೆ, ಪರಿಮಳ ಮಾತನಾಡಿದರು.
ಮರಾಠಿಕೊಪ್ಪದಲ್ಲಿ ಸಾಂಸ್ಕೃತಿಕ ಸಂಜೆ
ಸಂಜೆ ನಡೆದ ವಿಕಾಸ ವಿಶೇಷ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೂರಾರು ಜನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಶಿಸ್ತು ಬದ್ಧ ಯೋಗಾಸನ ಯೋಗ ಶಿಕ್ಷಕಿ ಶ್ಯಾಮಲಾ ಅವರ ತರಬೇತಿಗೆ ಸಾಕ್ಷಿಯಾಯಿತು. ಶಿಕ್ಷಕಿ ಸುಮಿತ್ರಾ ಅವರ ಸಂಯೋಜನೆಯ ನೃತ್ಯಗಳು ದೇಶ ಭಕ್ತಿ ಗೀತೆ, ಭಜನೆ, ಏಕಪಾತ್ರಾಭಿನಯ, ಅಡವಿ ತಾಯಿಗೆ ವಂದನೆ ಎಂಬ ನೃತ್ಯ ಇವೆಲ್ಲವೂ ವಿಶೇಷ ಮಕ್ಕಳಿಂದ ಪ್ರಕಟವಾದಾಗ ಸೇವೆ ಸಾರ್ಥಕ ಎನಿಸಿ ಚಪ್ಪಾಳೆ ಸುರಿಮಳೆಯಾಯಿತು.