ಯಲ್ಲಾಪುರ: ವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನವನ್ನು ಚಲಾಯಿಸಿ ಅಪಘಾತ ಪಡಿಸಿ ಮರಣ ಉಂಟಾಗುವಂತೆ ಮಾಡಿದ ಆರೋಪಿಗೆ ಕೆಳ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ಶಿರಸಿ ಪೀಠಾಸೀನ ನ್ಯಾಯಲಯವು ಎತ್ತಿ ಹಿಡಿದಿದೆ.
ತಾಲೂಕಿನ ಜೋಗಿಕೊಪ್ಪ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಆರೋಪಿ ಚಾಲಕನಾದ ಬಸವರಾಜ ಸಂಭಾಜಿ ಪವಾರ ಈತನು 21-8-2015ರಂದು ಸಂಜೆ ಟ್ರಾಕ್ಸ್ ವಾಹನವನ್ನು ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ತನ್ನ ಸೈಡ್ ಬಿಟ್ಟು ತೀರ ತನ್ನ ಬಲಕ್ಕೆ ಬಂದು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಟ್ರ‍್ಯಾಕ್ ವಾಹನದಲ್ಲಿದ್ದ ದಿವ್ಯಾ ಚಂದ್ರಕಾಂತ ಮಾಳ್ಸೇಕರ(21) ಗಾಯಗೊಂಡು, ಚಿಕಿತ್ಸೆಗೆ ಸ್ಪಂದಿಸದೆ ದಿ: 3-9-2015 ರಂದು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಳು. ಅಪಘಾತದಲ್ಲಿ ಗಾಯಗೊಂಡಿದ್ದ ಎಂಟು ಜನ ಸಾಕ್ಷಿದಾರರಿಗೆ ಸಾದಾ ಸ್ವರೂಪದ ಹಾಗೂ 7 ಜನರಿಗೆ ಬಾರಿ ಸ್ವರೂಪದ ಗಾಯ ನೋವು ಪಡಿಸಿ ಆರೋಪಿ ಚಾಲಕ ಬಸವರಾಜ ತಾನು ಬಾರಿ ಗಾಯಗೊಂಡಿದ್ದನು ಎಂದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಯಲ್ಲಾಪುರದಲ್ಲಿನ ವಿಚಾರಣಾ ನ್ಯಾಯಾಲಯ ಜೆಎಂಎಫ್‌ಸಿ ವಾದ, ಆರೋಪಿತರ ಮೇಲಿನ ಆಪಾದಿಸಿದಂತೆ ಅಪರಾಧವೆಸೆಗಿದ್ದು ಪ್ರಕರಣದಲ್ಲಿ ಸಾಬೀತಾಗಿದೆ ಎಂದು ಪರಿಗಣಿಸಿ, ಆರೋಪಿಗೆ ದೋಷಿಯೆಂದು ನಿರ್ಣಯಿಸಿ 1 ವರ್ಷ ಸಾಧಾ ಕಾರಾಗೃಹ ವಾಸ ಮತ್ತು 10000 ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಪ್ರಕರಣದ ತೀರ್ಪಿನ ವಿರುದ್ಧ ಆರೋಪಿತನು ಮೇಲ್ಮನವಿ ಸಲ್ಲಿಸಿದ್ದನು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಉತ್ತರ ಕನ್ನಡ ಶಿರಸಿ ಪೀಠಾಸೀನ ನ್ಯಾಯಾಧೀಶರಾದ ವಿ. ಜಗದೀಶ 1-3-2023 ರಂದು ಕೆಳ ನ್ಯಾಯಾಲಯವು ನೀಡಿದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ. ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರಾಜೇಶ ಮಳಗಿಕರ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕು.ಝೀನತ್‌ಬಾನು ಇಬ್ರಾಹಿಂ ಶೇಖ್ ವಾದ ಮಂಡಿಸಿದ್ದರು.