ಕಾರವಾರ: ಜಿಲ್ಲೆಯ ಸುಂದರ ಕಡಲತೀರದಲ್ಲಿ ಒಂದಾದ ಕಾರವಾರ ಕಡಲತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಹಲವು ಕಾಮಗಾರಿಗಳನ್ನ ಮಾಡಲಾಗಿತ್ತು. ಆದರೆ ಸಿ.ಆರ್.ಜೆಡ್ ಆದೇಶ ಇದೀಗ ಪ್ರವಾಸಿ ಚಟುವಟಿಕೆಗಳ ಹಿನ್ನಡೆಗೆ ಕಾರಣವಾಗಲಿದೆ ಎನ್ನುವ ಆತಂಕ ಕೆಲವರಲ್ಲಿ ಕಾಡತೊಡಗಿದೆ.
ಕಾರವಾರದ ರವೀಂದ್ರ ನಾಥ್ ಠಾಗೋರ್ ಕಡಲ ತೀರ ವಿಶಾಲವಾದ ಕಡಲ ತೀರವಾಗಿದ್ದರೂ ಪ್ರವಾಸಿಗರನ್ನ ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕಾರ್ಯಗಳನ್ನ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಹಲವು ವರ್ಷಗಳ ಹಿಂದೆ ಪ್ರವಾಸಿಗರನ್ನ ಆಕರ್ಷಿಸಲು ಕಾರವಾರದ ಕಡಲ ತೀರದಲ್ಲಿ ಪುಟಾಣಿ ರೈಲು, ಹೋಟೆಲ್ ಗಳಿದ್ದರು ನಂತರದ ದಿನದಲ್ಲಿ ಎಲ್ಲವೂ ಹಾಳಾಗಿದ್ದವು ಮತ್ತೆ ಹೊಸ ಚಟುವಟಿಕೆಗಳನ್ನು ಪ್ರಾರಂಭಿಸುವಲ್ಲಿ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು.
ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ, ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಎಸ್ಎಸ್ ನಕುಲ್ ಕಾರವಾರದ ಪ್ರವಾಸೋದ್ಯಮ ಬೆಳವಣಿಗೆಗೆ ಕಡಲ ತೀರದಲ್ಲಿ ಫುಡ್ ಕೋರ್ಟ್, ರೆಸ್ಟೋರೆಂಟ್, ರಾಕ್ ಗಾರ್ಡನ್ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಿದರು. ಟೆಂಡರ್ ಮೂಲಕವೇ ಈ ಚಟುವಟಿಕೆಗೆ ಅವಕಾಶ ನೀಡಿದ್ದು ಇಂದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಸ್ಥಳೀಯರು ಕಡಲ ತೀರದಲ್ಲಿ ಸಿ.ಆರ್.ಜೆಡ್ ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡಲಾಗಿದೆ ಎಂದು ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿದ್ದು, ಅಲ್ಲಿಂದ ರಾಜ್ಯ ಸಿ.ಆರ್ ಜೆಡ್ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎನ್ನಲಾಗಿದೆ. ಸದ್ಯ ಸ್ಥಳೀಯ ಸಿ.ಆರ್.ಜೆಡ್ ನವರು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದು ಕಡಲ ತೀರದಲ್ಲಿ ನಿರ್ಮಾಣವಾದ ಕಾಮಗಾರಿಗಳನ್ನ ತೆರವು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾರವಾರದ ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರಮುಖವಾಗಿ ರಾಕ್ ಗಾರ್ಡನ್ ಫುಡ್ ಕೋರ್ಟ್, ರೆಸ್ಟೋರೆಂಟ್‌ಗಳು ಸಹಕಾರಿಯಾಗಿದ್ದವು. ಇದೀಗ ಈ ಕಾಮಗಾರಿಗಳ ಮೇಲೆ ಸಿ.ಆರ್.ಜೆಡ್ ಕರಿನೆರಳು ಬಿದ್ದಿರುವುದು ಒಂದೊಮ್ಮೆ ಈ ಕಾಮಗಾರಿ ತೆರವು ಮಾಡಿದರೆ ಕಾರವಾರದ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸಿಆರ್.ಜೆಡ್ ತನ್ನ ನಿಯಮಗಳನ್ನ ಪ್ರವಾಸೋದ್ಯಮ ಅಭಿವೃದ್ದಿಗಾದರು ಸಡಿಲಗೊಳಿಸಬೇಕು. ಕಾರವಾರದ ಕಡಲ ತೀರದಲ್ಲಿ ಇರುವ ಪ್ರವಾಸಿ ಚಟುವಟಿಕೆಗಳನ್ನೇ ನಂಬಿ ಹಲವರು ಉದ್ಯೋಗವನ್ನ ಕಂಡುಕೊಂಡಿದ್ದು ಒಂದೊಮ್ಮೆ ಇದನ್ನು ತೆರವು ಮಾಡಿದರೆ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಜಿಲ್ಲಾಡಳಿತ, ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಕೆಲವರ ಆಗ್ರಹವಾಗಿದೆ.