ಕಾರವಾರ: ಬೆಳಕು ಮೀನುಗಾರಿಕೆ ಬಂದ್ ಮಾಡುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಕರಾವಳಿ ಮೀನುಗಾರರ ಹಿತರಕ್ಷಣಾ ಸಂಘದಡಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕರಾವಳಿಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಮೀನುಗಾರರು ಕಾರವಾರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿ, ಸರಕಾರ, ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಎಲ್ಲ ಮೀನುಗಾರರು ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿ ತಮ್ಮ ಆಕ್ರೋಶ ವ್ಯಕ್ತಪಪಡಿಸಿದರು. ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲರ್ ನಿಷೇಧವಿದ್ದಾಗಲೂ ಕಾನೂನು ಉಲ್ಲಂಘಿಸುವ ಬೋಟ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಹಾಗೂ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದರು.
ಆಳಸಮುದ್ರ ಮೀನುಗಾರಿಕೆ ನಡೆಸುವ ಕೆಲ ಯಾಂತ್ರಿಕ ಬೋಟುಗಳು ನಿಷೇಧಿತ ಬೆಳಕು ಮೀನುಗಾರಿಕೆ ನಡೆಸುವುದರಿಂದ ಸಮುದ್ರದಲ್ಲಿನ ದೊಡ್ಡ ಮೀನುಗಳು ಮಾತ್ರವಲ್ಲದೇ ಸಣ್ಣ ಸಣ್ಣ ಮರಿಗಳು ಸಹ ಬಲೆಗೆ ಬೀಳುತ್ತವೆ. ಅಲ್ಲದೇ ಎರಡು ಬೋಟುಗಳ ನಡುವೆ ಬಲೆ ಕಟ್ಟಿಕೊಂಡು ಎಳೆಯುವ ಬುಲ್ ಟ್ರಾಲಿಂಗ್‌ನಲ್ಲೂ ಸಣ್ಣ ಮೀನುಗಳು ಬಲೆಗೆ ಸಿಲುಕುತ್ತವೆ. ಈ ರೀತಿ ಮರಿಗಳನ್ನೇ ಹಿಡಿಯುವುದರಿಂದ ಸಮುದ್ರದಲ್ಲಿ ಮೀನು ಸಂತತಿ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಇತರೆ ಮೀನುಗಾರರಿಗೆ ಮೀನುಗಳೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ಅವೈಜ್ಞಾನಿಕ ಮೀನುಗಾರಿಕೆಗಳಿಗೆ ನಿಷೇಧವಿದ್ದರೂ ಅಧಿಕಾರಿಗಳು ಮಾತ್ರ ಸೂಕ್ತ ನಿಯಂತ್ರಣ ಮಾಡುತ್ತಿಲ್ಲ ಎನ್ನುವುದು ಮೀನುಗಾರರ ಆರೋಪವಾಗಿದೆ.