ಹೊನ್ನಾವರ: ದೇವರು ಕೊಟ್ಟರು ಪೂಜಾರಿ ಕೊಡುವುದಿಲ್ಲ ಎನ್ನುವ ನಾಣ್ನುಡಿಗೆ ಸರ್ಕಾರದ ಗ್ರಾಮ ಒನ್ ಸೇವೆ ಸಾಕ್ಷಿಯಾಗಿದೆ. ಸರ್ಕಾರದ ಸೇವೆಗಳು ತ್ವರಿತವಾಗಿ ಗ್ರಾಮೀಣ ಭಾಗದಲ್ಲಿ ಸಿಗಬೇಕು ಎಂದು ರಾಜ್ಯ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆ ಈ ವರ್ಷದ ಆರಂಭದಿಂದ ಹಳ್ಳ ಹಿಡಿಯಲು ಆರಂಭಿಸಿದೆ.
ತಾಲೂಕಿನ ಪ್ರತಿ ಗ್ರಾಮದಲ್ಲಿ ಸುಸಜ್ಜಿತ ಕಟ್ಟಡದೊಳಗೆ 750ಕ್ಕೂ ಅಧಿಕ ಸೇವೆ ನೀಡಲಾಗುವುದು ಎಂದು ದೊಡ್ಡದಾದ ಬ್ಯಾನರ್ ಹೊರತಾಗಿ ಕನಿಷ್ಠ 70 ಸೇವೆಯು ಸಿಗುವುದಿಲ್ಲ. ಹಲವು ಸೇವೆಗಳು ಏಜೆಂಟರ ಮೂಲಕ ಹೋದರೆ ಬೇಗ ದೊರೆಯಲಿದೆ ಎನ್ನುವ ಅಪವಾದವು ಇದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಈ ಹಿಂದೆ 15 ದಿನದಲ್ಲಿ ಸಿಗುತ್ತಿತ್ತು. ಆದರೆ ಇದೀಗ ಈ ಸೌಲಭ್ಯ ಗ್ರಾಮ ಓನ್ ಮೂಲಕ ನೀಡಲಾಗುತ್ತಿದೆ.
ಗ್ರಾಮ ಒನ್ ಮೂಲಕ ಸಲ್ಲಿಕೆಯಾದ ಅರ್ಜಿಯು ತಾಲೂಕಾಡಳಿತದಿಂದ ಮಂಜೂರಾಗಿ ಸಲ್ಲಿಕೆಯಾದ ಗ್ರಾಮ ಒನ್ ಕೇಂದ್ರದಲ್ಲಿ ಸರ್ಟಿಪಿಕೇಟ್ ಲಭ್ಯವಾಗುತ್ತಿತ್ತು. ಆದರೆ ಜನವರಿಯಿಂದ ಕಳುಹಿಸಿದ ಅರ್ಜಿ ತಿಂಗಳು ಕಳೆದರೂ ಸಾರ್ವಜನಿಕರ ಕೈಗೆ ಸರ್ಟಿಫಿಕೇಟ್ ಸಿಗುವುದಿಲ್ಲ. ಇದರ ಬದಲಾಗಿ ಖಾಸಗಿ ಕೇಂದ್ರದಲ್ಲಿ ಅಪ್ಲಿಕೇಶನ್ ಹಾಕಿ ನೆಮ್ಮದಿ ಕೇಂದ್ರಕ್ಕೆ ನೇರವಾಗಿ ನೀಡಿದರೆ ಅಲ್ಲಿಯೇ ವಾರದೊಳಗೆ ಪ್ರತಿ ದೊರೆಯಲಿದೆ. ಇದು ಒಂದು ಇಲಾಖೆಗೆ ಸಿಮೀತವಾಗಿರದೇ ಪ್ರತಿ ಇಲಾಖೆಯಲ್ಲಿಯೂ ಸರ್ಕಾರದ ಸೌಲಭ್ಯ ಪಡೆಯಲು ಇದೇ ರೀತಿಯಲ್ಲಿ ತೊಡಕಾಗುತ್ತಿದೆ. ಇನ್ನು ಗ್ರಾಮ ಒನ್ ಕೇಂದ್ರದಲ್ಲಿರುವ ಸೂಚನಾಫಲಕದಲ್ಲಿರುವ ನೂರಾರು ಸೇವೆಗಳು ಸಾರ್ವಜನಿಕರಿಗೇ ಸೌಲಭ್ಯ ಸಿಗದೇ ನೋಡುವುದಕ್ಕಷ್ಟೆ ಸೀಮಿತವಾಗಿದೆ.
ಇನ್ನು ಕಟ್ಟಡ ಕಾರ್ಮಿಕ ಕಾರ್ಡ್ ಪಡೆಯಲು ಎಲ್ಲಾ ದಾಖಲೆಯನ್ನಿಟ್ಟು ಅರ್ಜಿ ಸಲ್ಲಿಸಿದರೆ ವಾರದೊಳಗೆ ರಿಜೆಕ್ಟ್ ಆಗಿಲಿದೆ. ಇವರು ನಕಲಿ ಫಲಾನುಭವಿಗಳು, ದಾಖಲೆಯು ಸೂಕ್ತವಾಗಿಲ್ಲ ಎನ್ನುತ್ತಾರೆ. ಆದರೆ ಪಟ್ಟಣದ ಎರಡು ಖಾಸಗಿ ಕೇಂದ್ರದ ಮೂಲಕ ಅದೇ ದಾಖಲೆಯನ್ನು ಇಟ್ಟು ಅರ್ಜಿ ಸಲ್ಲಿಸಿದರೆ ಕಾರ್ಡ ಎರಡೇ ದಿನದಲ್ಲಿ ದೊರೆಯಲಿದೆ. ಗ್ರಾಮ ಓನ್ ಕೇಂದ್ರ ಆರಂಭವಾದ ಬಳಿಕ ಕಾರ್ಮಿಕ ಕಾರ್ಡಗೆ ಸಲ್ಲಿಕೆಯಾದ ಬಹುತೇಕ ಅರ್ಜಿಯು ತಿರಸ್ಕಾರ ಮಾಡುತ್ತಿರುವುದರಿಂದ ಸಾರ್ವಜನಿಕರು ಗ್ರಾಮ ಒನ್ ಕೇಂದ್ರದ ವಿಶ್ವಾಸವನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಇದೀಗ ಹಲವು ಕೇಂದ್ರದವರು ಅರ್ಜಿ ಸಲ್ಲಿಕೆಯನ್ನು ನಿಲ್ಲಿಸಿ ರಿಜೆಕ್ಟ್ ಆಗಲಿದೆ ಎನ್ನುವ ಕಾರಣವನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ.
ಸಾರ್ವಜನಿಕರ ಪಾಲಿಗೆ ಸುಲಭವಾಗಿ ಸಿಗಬೇಕಾದ ಸೌಲಭ್ಯ ಈ ವ್ಯವಸ್ಥೆಯನ್ನು ಸರಿಪಡಿಸುವತ್ತ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಮುಂದಾಗದೆ ಮಧ್ಯವರ್ತಿಗಳ ನೆರವಾಗುತ್ತಿದ್ದಾರೆ ಎನ್ನುವುದಕ್ಕೆ ಈ ಎಲ್ಲಾ ಬೆಳವಣೆಗೆಯೇ ಸಾಕ್ಷಿಯಾಗಿದೆ. ಮುಂದಿನ ದಿನದಲ್ಲಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಈ ಕೇಂದ್ರಕ್ಕೆ ಹೋಗದೇ ಏಜೆಂಟರನ್ನೆ ಅವಲಂಭಿಸುವ ಸಾಧ್ಯತೆ ಇದೆ. ಒಂದೊಮ್ಮೆ ಹಾಗೆ ಮುಂದಾದಲ್ಲಿ ಕೆಲವೇ ತಿಂಗಳಿನಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಇತಿಶ್ರೀ ಹಾಡಬೇಕಾಗಬಹುದು. ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಸಮರ್ಪಕ ಸೇವೆ ಸಿಗುವಂತೆ ನೋಡಿಕೊಳ್ಳಬೇಕಿದೆ.