ಜೊಯಿಡಾ: ತಾಲೂಕಿನ ಉಳವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಡಥಳ್ಳಿ ಗ್ರಾಮದಲ್ಲಿ ಜಿಪಿಎಸ್ ಆದ ಅರಣ್ಯ ಅತಿಕ್ರಮಣವನ್ನು ಅಣಶಿ ಅರಣ್ಯಾಧಿಕಾರಿಗಳು ಖುಲ್ಲಾಪಡಿಸಿದ್ದಾರೆ. ಇದರಿಂದ ಜಿಪಿಎಸ್ ಆದ ಅತಿಕ್ರಮಣ ಮುಟ್ಟಬಾರದೆಂಬ ಸರ್ಕಾರದ ನಿರ್ದೇಶನವನ್ನು ಅಧಿಕಾರಿಗಳು ಲೆಕ್ಕಿಸದೆ ನಮ್ಮ ಅತಿಕ್ರಮಣವನ್ನು ಖುಲ್ಲಾ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊಡಥಳ್ಳಿ ಗ್ರಾಮದ ರೈತ ವೆಂಕಣ್ಣ ಗೌಡ ಮತ್ತು ದ್ಯಾವಣ್ಣ ಗೌಡ ಕಳೆದ ಐದು ತಲೆಮಾರಿನ ಪೂರ್ವದಿಂದ ಕೊಡಥಳ್ಳಿ ಗ್ರಾಮದಲ್ಲಿ ಫಾರೆಸ್ಟ್ ಸರ್ವೆ ನಂ.10ರಲ್ಲಿ ಅರಣ್ಯ ಅತಿಕ್ರಮಣ ಮಾಡಿಕೊಂಡಿದ್ದರು. 2006ರ ಬುಡಕಟ್ಟು ಕಾಯ್ದೆ ಪ್ರಕಾರ ಜಿಪಿಎಸ್ ಸರ್ವೆ ಮಾಡಿಕೊಂಡು ಅದರಲ್ಲಿ ಬೆಳೆದ ಅಡಿಕೆ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದು ಜೀವನ ಮಾಡುತ್ತಾರೆ. ಆದರೆ ಅಣಶಿ ವಲಯ ಅರಣ್ಯಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಬಂದು ಜಬರದಸ್ತಿಯಿಂದ ಬಡ ರೈತರ ಅಡಿಕೆ ಸಸಿಗಳನ್ನು ಕಿತ್ತು ಹಾಕಿದ್ದು, ಅರಣ್ಯ ಅಧಿಕಾರಿಗಳು ಮಾನವೀಯತೆ ಇಲ್ಲದಂತೆ ವರ್ತಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.