ಕಾರವಾರ: ಗೋವಾ ಕರ್ನಾಟಕ ಗಡಿಯಾದ ಅನಮೋಡ ಮೂಲಕ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ಮಾ.8ರಂದು ಅನಮೋಡಿನಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಲಾರಿ ಮಾಲಿಕರ- ಚಾಲಕರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಲಾರಿ ಮಾಲಿಕರ- ಚಾಲಕರ ಸಂಘದ ರಾಜಾರಾಮ ನಾಯ್ಕ, 2018ರಲ್ಲಿ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಪೂರ್ಣವಾಗಿ ಸಂಚಾರವನ್ನು ಉತ್ತರ ಕನ್ನಡ ಜಿಲ್ಲಾಡಳಿತ ಬಂದ್ ಮಾಡಿತ್ತು. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಸಣ್ಣಪುಟ್ಟ ವಾಹನಗಳು, ಬಸ್, ಪ್ರವಾಸಿಗರ ವಾಹನ ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ. ಆದರೆ ಭಾರಿ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರವಾರ ಯಲ್ಲಾಪುರ ಮಾರ್ಗದಲ್ಲಿ ಸಂಚಾರ ಮಾಡುತ್ತಿರುವುದರಿಂದ 150 ಕಿಲೋ ಮೀಟರ್ ದೂರ ಹೆಚ್ಚಾಗಲಿದೆ. ಹೀಗಾಗಿ ಡಿಸೇಲ್ ಅಧಿಕವಾಗಿ ಬೇಕಾಗುತ್ತದೆ. ಇದರಿಂದಾಗಿ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ. ಅನಮೋಡ ಮಾರ್ಗದಲ್ಲಿ ಕೂಡಲೇ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಗೋವಾ ಯೂನಿಯನ್‌ನ ಶ್ರೀಕಾಂತ ಚಾರಿ, ಫೀರೋಜ್ ದೇಸಾಯಿ, ಗಣೇಶ ಗುಂಡ್ಕಲ್, ರಶೀದ್ ಖಾಜಿ, ಝಹೀರ ಥಡ್ಕರ, ಎಂ.ಕೆ.ನಾಯ್ಡು, ಗೌರೀಶ ಚೌಹಾಣ್ ಇದ್ದರು.