ಕುಮಟಾ: ಮೂರೂರಿನ ಕೋಣಾರೆಯ ಮಹಾವಿಷ್ಣು ದೇವಾಲಯದ ಆವಾರಣದಲ್ಲಿ ದೇವರು ಹೆಗಡೆ ಯಕ್ಷವೇದಿಕೆಯಿಂದ ಕರ್ಕಿಯ ಸತ್ಯ ಹಾಸ್ಯಗಾರರನ್ನು ಫಲತಾಂಬೂಲ ಹಾಗೂ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ದಿಮೆದಾರ ಮುರಳೀಧರ ಪ್ರಭು ನೆರವೇರಿಸಿದರು. ನಂತರ ಮಾತನಾಡಿದ ಅವರು, ದೇವರು ಹೆಗಡೆಯವರ ವೇಷಗಾರಿಕೆಯನ್ನು ನೆನಪಿಸುತ್ತ ಒಂದು ‘ಹಾಲ್ ಓಫ್ ಫೇಮ್’ ಅಂತ ಮಾಡಿ ಉತ್ತರಕನ್ನಡದ ಶ್ರೇಷ್ಠ ಕಲಾವಿದರನ್ನು ಅವರ ಭಾವಚಿತ್ರ ಮತ್ತು ಕಿರುಪರಿಚಯ ಮಾಡುವಂತಹ ಚಿಕ್ಕ ಬರಹದೊಂದಿಗೆ ಕ್ರೋಢೀಕರಿಸಿ ಒಂದು ಯಕ್ಷ ಸಭಾಗ್ರಹ ಮಾಡಿ ಅಲ್ಲಿ ಕಾಪಾಡಬೇಕೆಂದು ಅಮೂಲ್ಯ ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಸತ್ಯಹಾಸ್ಯಗಾರರು ತಮ್ಮ ಎಂಬತ್ತೊಂಬತ್ತರ ವಯಸ್ಸಿನಲ್ಲಿ ಯಾರ ಸಹಾಯವಿಲ್ಲದೆ ನೇರವಾಗಿ ವೇದಿಕೆಯ ಮುಂಭಾಗಕ್ಕೆ ಕುಣಿಯುತ್ತಲೇ ಬಂದು ಯಕ್ಷಗಾನದ ಹಾಡನ್ನು ಹಾಡುತ್ತ ದೇವರು ಹೆಗಡೆಯವರು ಹೇಗೆ ಅಭಿನಯಿಸುತ್ತಿದ್ದರೆಂಬ ತಮ್ಮ ಅನುಭವವನ್ನು ಅಭಿನಯಿಸಿತೋರಿದರು. ತಮ್ಮ ಮೇಳ ಮತ್ತು ದೇವರು ಹೆಗಡೆಯವರ ಅವಿನಾಭಾವ ಸಂಬಂಧವನ್ನು ಮಾರ್ಮಿಕವಾಗಿ ಬಿಚ್ಚಿಟ್ಟು ಸನ್ಮಾನಪಡೆದ ಧನ್ಯತೆಯನ್ನು ವ್ಯಕ್ತಪಡಿಸಿದರು.
ಅತಿಥಿಯಾದ ಸಂಪಾದಕ ಗೋಪಾಲಕೃಷ್ಣ ಭಾಗವತ ಕಡತೋಕ ಮಾತನಾಡಿದರು. ಜಿ.ಕೆ.ಹೆಗಡೆ ಹರಿಕೆರಿಯವರು ಅಭಿನಂದನಾ ಭಾಷಣವನ್ನು ಮಾಡುತ್ತ ಸತ್ಯ ಹಾಸ್ಯಗಾರರ ಪಾತ್ರ ಔಚಿತ್ಯತೆ? ಅವರ ಸರಳ ಬದುಕು?ಅವರ ದಣಿವರಿಯದ ಉತ್ಸಾಹವನ್ನು ಮನಮುಟ್ಟುವಂತೆ ವರ್ಣಿಸಿದರು.
ಯಕ್ಷವೇದಿಕೆಯ ಅಧ್ಯಕ್ಷ ಸುಬ್ರಾಯ ಭಟ್ಟರು ಪ್ರಾಸ್ತವಿಕ ಮಾತನಾಡಿದರು. ನಿತ್ಯಾನಂದ ಹೆಗಡೆ ಸನ್ಮಾನಪತ್ರ ವಾಚಿಸಿದರು. ಯಕ್ಷವೇದಿಕೆಯ ಗೌರವಾಧ್ಯಕ್ಷ ವಿ.ಎಸ್.ಹೆಗಡೆ ಹಟ್ಟಿಕೇರಿ ಸಮಾರೋಪದ ಮಾತನಾಡುತ್ತ, ತಮ್ಮೆಲ್ಲರ ಸಹಕಾರ ಇದೇ ರೀತಿ ಸಿಕ್ಕರೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಂಘಟನೆ ಮಾಡುವುದಾಗಿ ಹೇಳಿದರು. ಜಿ.ವಿ.ಹೆಗಡೆ ಹುಳಸೇಮಕ್ಕಿ ಧನ್ಯವಾದ ಸಮರ್ಪಣೆ ಮಾಡಿದರು. ದೇವಳದ ಟ್ರಸ್ಟ್ ಅಧ್ಯಕ್ಷ ಜಿ.ಆರ್.ಹೆಗಡೆ ಉಪಸ್ಥಿತರಿದ್ದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಕೊನೆಗೆ ನುರಿತ ಕಲಾವಿದರಿಂದ ನಳದಮಯಂತಿ ಎಂಬ ಆಖ್ಯಾನವನ್ನು ಆಡಿತೋರಿಸಲಾಯಿತು.
ಯಕ್ಷವೇದಿಕೆಯಿಂದ ಸತ್ಯ ಹಾಸ್ಯಗಾರರಿಗೆ ಸನ್ಮಾನ
