ಅಂಕೋಲಾ: ವಯೋನಿವೃತ್ತಿ ಹೊಂದಿದ ಮೂವರು ಶಿಕ್ಷಕರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.
ಬೆಳಸೆ ನಂ.1 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿಯಾಗಿದ್ದ ಸವಿತಾ ಟಿ.ಕುಚಿನಾಡ, ಶಿರಕುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿಯಾಗಿದ್ದ ವತ್ಸಲಾ ಬಂಟ, ಬೊಬ್ರುವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋಪಾಲ ಎಚ್.ನಾಯಕ ಅವರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಕೋಲಾ ನಂ.1ರಲ್ಲಿ ಆತ್ಮೀಯವಾಗಿ ಗೌರವಿಸಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯಾಧ್ಯಾಪಕಿ ಸವಿತಾ ಕುಚಿನಾಡ, ಸಂಘ ಗೌರವಿಸಿ ಬೀಳ್ಕೊಟ್ಟಿರುವುದು ಅತೀವ ಸಂತಸವನ್ನು ತಂದಿದೆ. ನಮ್ಮ ಕೆಲಸಗಳಿಗೆ ಪ್ರಶಂಸೆ ದೊರೆತರೆ ಬೆನ್ನು ತಟ್ಟಿದರೆ ಕೆಲಸ ಮಾಡಲು ಇನ್ನಷ್ಟು ಪ್ರೋತ್ಸಾಹವಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಗೋಪಾಲ ಎಚ್.ನಾಯಕ, ಸಂಘದ ಸಹಕಾರ ಮರೆಯಲಾರದ್ದು. ಉತ್ತಮ ಸೇವೆ ಮಾಡಲು ಇಲಾಖೆಯಲ್ಲಿ ದೊರೆತ ಸಹಕಾರ ಕಾರಣವಾಗಿದೆ ಎಂದರು. ನಿವೃತ್ತ ಮುಖ್ಯಾಧ್ಯಾಪಕಿ ವತ್ಸಲಾ ಬಂಟ ಮಾತನಾಡಿ, ನಾನು ವಿದ್ಯಾದಾನ ಮಾಡಿದ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ತುಂಬಾ ಹೆಮ್ಮೆಯನ್ನು ತಂದಿದೆ. ಸಂಘ ನೀಡಿದ ಗೌರವ ಜೀವನದಲ್ಲಿ ಅವಿಸ್ಮರಣೀಯವಾದುದು ಎಂದರು.
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ಗೌರವಿಸುವುದು ಭಾರತೀಯ ಸಂಸ್ಕಾರ. ಈ ದಿಸೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾದ ಕಾರ್ಯ ಶ್ಲಾಘನೀಯ ತಾನೂ ಬೆಳೆಯಬೇಕು. ಇನ್ನೊಬ್ಬರನ್ನು ಬೆಳೆಸಬೇಕು. ಸಮುದಾಯ- ಸಮಾಜವನ್ನು ಪ್ರೀತಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯಾಧ್ಯಾಪಕ ಭಾಸ್ಕರ ಗಾಂವಕರ ಮಾತನಾಡಿ, ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸ ಅವಿಸ್ಮರಣೀಯವಾದದ್ದು. ಇದು ಶಿಕ್ಷಕರಿಗೆ ದೇವರು ಕೊಟ್ಟ ವರ. ಶಾಲೆಯಲ್ಲಿ ಸೌಹಾರ್ದಯುತ ವಾತಾವರಣ ಶಿಕ್ಷಕರಿಗೆ ಖುಷಿಕೊಡುವಂಥದ್ದು. ಈ ಸತ್ಕಾರ್ಯದಲ್ಲಿ ಭಾಗವಹಿಸಿಲು ಅವಕಾಶ ದೊರೆತಿರುವುದು ಸಂತೋಷವನ್ನು ತಂದಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ಮಾತನಾಡಿ, ನಿವೃತ್ತರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡುವ ಮೂಲಕ ಸಂಘ ಅವರ ಸುದೀರ್ಘ ಸೇವೆಗೆ ಗೌರವ ಸಲ್ಲಿಸುತ್ತಿದೆ ಎಂದರು. ಶೇಖರ ಗಾಂವಕರ ಅಭಿನಂದಿಸಿ ಮಾತನಾಡಿದರು.
ಶಿಕ್ಷಕರ ಸಂಘದ ಉಪಾಧ್ಯಕ್ಷೆ ಭಾರತಿ ವಿ.ನಾಯಕ, ಸದಸ್ಯರಾದ ಸವಿತಾ ಬಿ. ಗಾಂವಕರ, ವೆಂಕಮ್ಮ ಎಚ್. ನಾಯಕ, ತುಕಾರಾಮ ಬಂಟ, ದಿವಾಕರ ದೇವನಮನೆ ಸಂಜೀವ ಆರ್. ನಾಯಕ, ಶೋಭಾ ಎಸ್. ನಾಯಕ, ಆನಂದು ವಿ. ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸಿ.ಆರ್.ಪಿ. ಶಾಂಬಾ ಗೌಡ, ಐ.ಆರ್.ಟಿ. ಬೀರಣ್ಣ ನಾಯಕ, ರಘುವೀರ ಗಾಂವಕರ, ಚಂದ್ರಕಾAತ ಗಾಂವಕರ, ಸಹನಾ ಮೋಹನ ಪಟಗಾರ ಸಹಕರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್.ನಾಯಕ ಸ್ವಾಗತಿಸಿದರು. ಲಕ್ಷ್ಮಿ ಎನ್.ನಾಯಕ ವಂದಿಸಿದರು.
ಶಾಲಾ ಶಿಕ್ಷಕರ ಸಂಘದಿಂದ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ
