ದಾಂಡೇಲಿ: ನಗರದ ಕ್ರಿಯಾಶೀಲ ಬರಹಗಾರ, ಲೇಖಕ ಹಾಗೂ ಕವಿ ಪ್ರಮೋದ್ ನಾಯ್ಕ ಅವರು ರಚಿಸಿದ ಸ್ವಾತಂತ್ರ್ಯ ಹೋರಾಟಗಾರ ದಿ. ಹೆಂಜಾ ನಾಯ್ಕ ಅವರ ಜೀವನಾಧರಿತ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಅಮೇರಿಕಾದ ಡಲ್ಲಾಸ್, ಟೆಕ್ಸಾಸ್‌ನಲ್ಲಿ ನಡೆಯಿತು.
ನಗರದ ಸ್ನೇಹಪರ ವ್ಯಕ್ತಿತ್ವದ ಹಾಗೂ ಶೈಕ್ಷಣಿಕ ಕ್ಷೇತ್ರದ ಪುರೋ ಅಭಿವೃದ್ಧಿಗಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ದಿ. ಶೀಲಾ ನಾಯ್ಕ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಕಾರ‍್ಯಕ್ರಮದಲ್ಲಿ ಅವರ ಪತಿ ವಿ.ವಿ.ನಾಯ್ಕ ಅವರು ಧ್ವನಿ ಸುರುಳಿಯನ್ನು ಅನಾರವಣಗೊಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕ್ಷತ್ರಿಯ ಕೋಮಾರಪಂಥ ಸಮಾಜದ ವೀರ ಯೋಧ, ಕಾರವಾರದ ಹೆಂಜಾ ನಾಯ್ಕ ಅವರ ಸಾಹಸ, ಶೌರ್ಯ, ಬ್ರಿಟೀಷರ ವಿರುದ್ದ ಹೋರಾಡಿ ವಿಜಯ ಪತಾಕೆಯನ್ನು ಹಾರಿಸುವ ಮೂಲಕ ಬ್ರೀಟಿಷರ ಸದ್ದಡಗಿಸಿದ ಮಹಾನ್ ಹೋರಾಟಗಾರನ ಸಾಧನೆ ಮತ್ತು ಜೀವನಗಾಥೆಯನ್ನು ಸದಾ ಸ್ಮರಿಸಿಕೊಳ್ಳಬೇಕೆಂಬ ಅಚಲ ಶ್ರದ್ಧೆ ಮತ್ತು ಅಭಿಮಾನದಿಂದ ದಾಂಡೇಲಿಯ ಜಂಗಲ್ ಲಾಡ್ಜಸಿನಲ್ಲಿ ಹಿರಿಯ ಪರಿಸರ ತಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಮೋದ್ ನಾಯ್ಕ ಅವರು ರಚಿಸಿದ ಹಾಡುಗಳ ಧ್ವನಿ ಸುರುಳಿ ಇದಾಗಿದೆ.
ಪ್ರಮೋದ್ ನಾಯ್ಕ ಅವರು ಬರೆದ ಹಾಡಿಗೆ ಸಂಗೀತವನ್ನು ರಾಕೇಶ್ ಡಿಸೋಜಾ ಮತ್ತು ಜೋಯ್ಸನ್ ಡಿಸೋಜಾ ಅವರು ನೀಡಿದ್ದು, ಖ್ಯಾತ ಗಾಯಕಿ ವಿಭಾ.ಎಸ್.ನಾಯಕ ಹಾಡಿದ್ದಾರೆ. ಧ್ವನಿಸುರುಳಿಗೆ ಕಾರವಾರದ ನಂದನಗದ್ದಾದ ರಾಹುಲ್.ಎಸ್.ನಾಯ್ಕ, ಕಾರವಾರ ದೇವಭಾಗದ ದಿನೇಶ್ ನಾಯಕ ಅವರು ಚಿತ್ರಗಳನ್ನು ಒದಗಿಸಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡ ವಿ.ವಿ.ನಾಯ್ಕ ಅವರ ನಿರ್ಮಾಪಕತ್ವದಲ್ಲಿ ಸಿದ್ದಗೊಂಡ ಈ ಧ್ವನಿಸುರುಳಿಗೆ ಪ್ರಶಾಂತ.ವಿ.ನಾಯ್ಕ ಮತ್ತು ದಿಲಿಪಾ ಮಾಧಿ ಬೆಂಗಳೂರು, ನಿಶಾಂತ್.ವಿ.ನಾಯ್ಕ ಮತ್ತು ಸಿಂಧು ಬೇದಾರೆ, ಅಮೇರಿಕಾ ಅವರು ಸಹಕಾರವನ್ನು ನೀಡಿದ್ದಾರೆ.
ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿ.ವಿ.ನಾಯ್ಕ ಅವರು ಪ್ರಮೋದ್ ನಾಯ್ಕ ಅವರ ಕ್ರಿಯಾಶೀಲತೆಯನ್ನು ಗೌರವಿಸಿ ಬೆಳೆಸಬೇಕಾಗಿರುವುದು ನಮ್ಮ ಆಧ್ಯ ಕರ್ತವ್ಯ. ನನ್ನ ಪತ್ನಿ ದಿ.ಶೀಲಾ ನಾಯ್ಕ ಅವರೆ ಈ ಧ್ವನಿ ಸುರುಳಿ ನಿರ್ಮಾಣಕ್ಕೆ ನನಗೆ ಪ್ರೇರಣೆಯಾಗಿದ್ದಾರೆ. ಹಾಗಾಗಿ ದಿ.ಶೀಲಾ ನಾಯ್ಕ ಅವರ ನೆನಪಿನೊಂದಿಗೆ ಈ ಧ್ವನಿ ಸುರುಳಿಯನ್ನು ಅನಾವರಣಗೊಳಿಸಲು ಹೆಮ್ಮೆಯೆನಿಸುತ್ತದೆ ಎಂದರು. ಕವಿ, ಲೇಖಕ, ಸೃಜನಶೀಲ ಬರಹಗಾರ ಮತ್ತು ಪರಿಸರ ತಜ್ಞ ಪ್ರಮೋದ್ ನಾಯ್ಕ ಅವರ ಈ ಶ್ರಮ ಮತ್ತು ಸಾಧನೆಗೆ ನಗರದ ಗಣ್ಯರನೇಕರು ಹಾಗೂ ನಗರದ ಕೋಮಾರಪಂಥ ಸಮಾಜ ಬಾಂಧವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.