ಭಟ್ಕಳ: ಇಲ್ಲಿನ ಕರಿಕಲ್ ಧ್ಯಾನ ಮಂದಿರದ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಮಾ.4ರಂದು ನಡೆಯಲಿದೆ ಎಂದು ನಾಮಧಾರಿ ಗುರುಮಠದ ಶ್ರೀನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದರು.
ಅವರು ಆಸರಕೇರಿಯ ನಾಮಧಾರಿ ಸಭಾಭವನದಲ್ಲಿ ವರ್ಧಂತಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಠಾ ವರ್ಧತಿ ಉತ್ಸವವು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ರಾಮತಾರಕ ಮಹಾಯಜ್ಞ ನಡೆಯಲಿದೆ. ಸಮಾಜದ ಎಲ್ಲ ಭಕ್ತರು ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ, ಧ್ಯಾನ ಕುಟೀರದಲ್ಲಿ ಶನಿವಾರ ಬೆಳಿಗ್ಗೆ 7ರಿಂದ 10 ಗಂಟೆಯ ತನಕ ಲೋಕ ಕಲ್ಯಾಣಾರ್ಥವಾಗಿ ರಾಮತಾರಕ ಮಹಾಯಜ್ಞ, 10ರಿಂದ 12 ಗಂಟೆಯವರೆಗೆ ಭಕ್ತ ಮಂಡಳಿಯವರಿಂದ ಭಜನೆ, 12 ಗಂಟೆಗೆ ಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಚನ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಯಿಂದ ಅನ್ನದಾಸೋಹ ನಡೆಯಲಿದೆ. ಭಟ್ಕಳದ ಎಲ್ಲ ಸಮಾಜದ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಆಸರಕೇರಿ ಶ್ರೀಗುರುಮಠದ ಕಾರ್ಯದರ್ಶಿ ಮಾಸ್ತಿ ನಾಯ್ಕ, ಭವಾನಿಶಂಕರ ನಾಯ್ಕ, ಗಿರೀಶ ನಾಯ್ಕ, ಕೆ.ಆರ್.ನಾಯ್ಕ, ವಿನಾಯಕ ನಾಯ್ಕ, ವಿಠ್ಠಲ್ ನಾಯ್ಕ ಮತ್ತಿತರರು ಇದ್ದರು.