ಕಾರವಾರ: ಜಿಲ್ಲೆಯ ಕುಮಟಾ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲುವುದಕ್ಕಿಂತ ಕಾಂಗ್ರೆಸ್ ಟಿಕೇಟ್ ಪಡೆಯುವುದೇ ಹೆಚ್ಚು ಪ್ರತಿಷ್ಠೆಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಈ ಬಾರಿ ಕುಮಟಾಕ್ಕೆ ನಾಮಧಾರಿ ಕೋಟಾದಡಿ ಕಾಂಗ್ರೆಸ್ ಟಿಕೇಟ್ ಕೊಡುವ ಸಾಧ್ಯತೆ ಇದೆ ಎನ್ನಲಾಗಿದ್ದು ಟಿಕೇಟ್ ರೇಸ್ ನಲ್ಲಿ ಮಂಜುನಾಥ್ ನಾಯ್ಕ ಮುಂದೆ ಸಾಗಿದ್ದಾರೆನ್ನುವ ಮಾತು ಪಕ್ಷದ ವಲಯದಲ್ಲಿಯೇ ಕೇಳಿ ಬಂದಿದೆ.
ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಪೈಕಿ ಜಿದ್ದಾಜಿದ್ದಿನ ಕ್ಷೇತ್ರ ಎಂದೇ ಕರೆಯಲಾಗಿರುವ ಕ್ಷೇತ್ರ ಕುಮಟಾ ಕ್ಷೇತ್ರವಾಗಿದ್ದು, ಈ ಬಾರಿ ಕ್ಷೇತ್ರದಲ್ಲಿ ಗೆಲುವಿಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ ಎನ್ನಲಾಗಿದೆ. ಈಗಾಗಲೇ ಜೆಡಿಎಸ್ ಪಕ್ಷದಿಂದ ಸೂರಜ್ ನಾಯ್ಕ ಸೋನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಪ್ರಚಾರ ಕಾರ್ಯವನ್ನು ಸಹ ಪ್ರಾರಂಭಿಸಿದ್ದಾರೆ. ಇನ್ನೊಂದೆಡೆ ಬಿಜೆಪಿಯಿಂದ ಹಾಲಿ ಶಾಸಕ ದಿನಕರ ಶೆಟ್ಟಿ ಅವರಿಗೆ ಟಿಕೇಟ್ ಖಚಿತ ಎನ್ನಲಾಗಿದ್ದು ಅವರು ಸಹ ಕಳೆದ ಒಂದು ವಾರದಿಂದ ಆಕ್ಟೀವ್ ಆಗಿ ಕ್ಷೇತ್ರದಲ್ಲಿ ತಿರುಗಾಟ ಪ್ರಾರಂಭಿಸಿದ್ದಾರೆ.
ಇತ್ತ ಈ ಬಾರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ಯಾರಿಗೆ ಸಿಗಲಿದೆ ಎನ್ನುವುದೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಚುನಾವಣೆ ಗೆಲ್ಲುವುದಕ್ಕಿಂತ ಟಿಕೇಟ್ ಪಡೆಯುವುದು ಪ್ರತಿಷ್ಠೆಯಾಗಿದೆ. ಇದರ ನಡುವೆ ಕುಮಟಾ ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಗಳ ಪೈಕಿ ಹಲವುರು ಶತಾಯ ಗತಾಯ ಟಿಕೇಟ್ ಪಡೆಯಲೇಬೇಕು ಎಂದು ಪ್ರಯತ್ನ ನಡೆಸುತ್ತಿದ್ದು ಇದರಲ್ಲಿ ಮಂಜುನಾಥ್ ನಾಯ್ಕ ಅವರ ಹೆಸರು ಮುಂಚೂಣಿಗೆ ಬಂದಿದೆ ಎನ್ನಲಾಗಿದೆ. ಕರಾವಳಿಯ ಭಟ್ಕಳ ಕ್ಷೇತ್ರದಲ್ಲಿ ನಾಮದಾರಿ ಸಮುದಾಯದ ಅಭ್ಯರ್ಥಿಗೆ 2013ರಲ್ಲಿ ಕಾಂಗ್ರೆಸ್ ನಿಂದ ಟಿಕೇಟ್ ನೀಡಲಾಗಿತ್ತು. ಅದಾದ ನಂತರ ಈವರೆಗೂ ಟಿಕೇಟ್ ನೀಡಿಲ್ಲ. ಜಿಲ್ಲೆಯ ಕರಾವಳಿ ಕ್ಷೇತ್ರವಾದ ಕುಮಟಾ ಹಾಗೂ ಭಟ್ಕಳದಲ್ಲಿ ನಾಮದಾರಿ ಸಮುದಾಯದ ಮತಗಳೇ ನಿರ್ಣಾಯವಾಗಿದ್ದು ಈಗಾಗಲೇ ಭಟ್ಕಳ ಕ್ಷೇತ್ರದಲ್ಲಿ ಮಂಕಾಳ ವೈದ್ಯರಿಗೆ ಟಿಕೇಟ್ ಫೈನಲ್ ಆಗಿದೆ ಎನ್ನಲಾಗಿದ್ದು ಕುಮಟಾ ಕ್ಷೇತ್ರದಲ್ಲಿ ನಾಮದಾರಿ ಸಮುದಾಯಕ್ಕೆ ಅವಕಾಶ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಮಂಜುನಾಥ ನಾಯ್ಕ ಅವರ ಹೆಸರು ಮುಂಚೂಣಿಗೆ ಪಕ್ಷದಲ್ಲಿ ಬಂದಿದ್ದು ಟಿಕೇಟ್ ಸಿಗುವ ಸಾಧ್ಯತೆ ಬಹುತೇಕ ಇದೆ ಎನ್ನಲಾಗಿದೆ. ಕ್ಷೇತ್ರದಲ್ಲಿ ಕಳೆದ ಹಲವು ದಿನಗಳಿಂದ ಆಕ್ಟೀವ್ ಆಗಿ ಮಂಜುನಾಥ ನಾಯ್ಕ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಕ್ಷೇತ್ರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಕ್ರೀಡೆ ಇನ್ನಿತರ ಕಾರ್ಯಕ್ರಮಗಳಿಗೆ ಧನ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಯುವ ತಂಡವನ್ನ ಕಟ್ಟಿಕೊಂಡು ಮಿಂಚಿನ ಸಂಚಲನ ಮೂಡಿಸಿದ್ದು, ಹೊಸಬರಿಗೆ ಈ ಬಾರಿ ಅವಕಾಶ ಕೊಡುವ ನಿಟ್ಟಿನಲ್ಲಿ ಪಕ್ಷದ ನಾಯಕರು ಸಹ ಕುಮಟಾ ಕ್ಷೇತ್ರದಲ್ಲಿ ಮಂಜುನಾಥ್ ನಾಯ್ಕ ಅವರ ಹೆಸರನ್ನ ಮಣ್ಣನೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು, ಮಾರ್ಚ್ ಅಂತ್ಯದ ಒಳಗೆ ಟಿಕೇಟ್ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.