ಶಿರಸಿ: ಎಂಇಎಸ್ ಸಂಸ್ಥೆ ಅಗಾಧವಾಗಿದೆ. ಎಲ್ಲರ ಸಹಕಾರದಿಂದ ಸಂಸ್ಥೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ಸಂಸ್ಥೆಯನ್ನು ಇನ್ನೂ ಉತ್ತುಂಗಕ್ಕೆ ಏರಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಎಂಇಎಸ್ ಅಧ್ಯಕ್ಷ ಜಿ. ಎಂ.ಹೆಗಡೆ ಮುಳಖಂಡ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಳೆದ ಮೂರು ದಶಕಗಳ ಕಾಲ ಗಣಿತ ಪ್ರಾಧ್ಯಾಪಕರಾಗಿ ನಿವೃತ್ತರಾದ ಎಂ.ಕೆ. ಹೆಗಡೆ ಹಾಗೂ ಕಾರ್ಯಾಲಯ ಸಿಬ್ಬಂದಿ ಹರೀಶ್ ಜೋಗಳೇಕರ್ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.ನಮಗೆ ನೌಕರಿ ನೀಡಿದ ಸಂಸ್ಥೆಯ ಮೇಲೆ ಪ್ರೀತಿ ಇರಲಿ. ಉತ್ತಮ ಶಿಕ್ಷಕರು ನಿವೃತ್ತರಾದ ಹಾಗೆ ಸಂಸ್ಥೆಗೆ ನಷ್ಟ ಉಂಟಾಗುತ್ತದೆ. ನಿವೃತ್ತಿಯ ನಂತರ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದರು.
ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್. ಕೆ.ಭಾಗವತ್ ಮಾತನಾಡಿ ನಮಗೆ ಅನ್ನ ಹಾಕಿದ ಸಂಸ್ಥೆಗೆ ಗೌರವಿಸುವ ಋಣವನ್ನು ನೆನೆಯುವ ಗುಣ ನಮ್ಮದಾಗಿರಬೇಕು. ಇಂದು ನಿವೃತ್ತರಾದ ಇಬ್ಬರೂ ಸಂಸ್ಥೆಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಸ್ವಾಗತಿಸಿದರು. ಡಾ. ಕೃಷ್ಣಮೂರ್ತಿ ವಂದಿಸಿದರು. ಸಿಬ್ಬಂದಿ ಕಾರ್ಯದರ್ಶಿ ರವಿ ಕೋಳೆಕರ್ ನಿರೂಪಿಸಿದರು.