ಕಾರವಾರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರವಾರ ಶೈಕ್ಷಣಿಕ ಜಿಲ್ಲೆ ಹಾಗೂ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2023ರ ಪ್ರಯುಕ್ತ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ ಎಂಬ ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆ ನಡೆಯಿತು.
ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವಂತೆ ಹುರಿದುಂಬಿಸಿದರು. ಬಾಡ ನ್ಯೂ ಹೈಸ್ಕೂಲ್ ಮುಖ್ಯಾಧ್ಯಾಪಕ ರಾಜೇಶ ಶೇಣ್ವಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ರಾಷ್ಟ್ರೀಯ ವಿಜ್ಞಾನ ದಿನ ಹೇಗೆ ಆಚರಣೆಗೆ ಬಂದಿದೆ, ಸರ್.ಸಿ.ವಿ.ರಾಮನ್‌ರವರ ಜೊತೆ ಸಂಭವಿಸಿದ ಕೆಲವೊಂದು ಪ್ರಮುಖ ಘಟನೆಗಳು, ಅವರ ಸಂಶೋಧನೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತಿ ಎನ್‌ಆರ್‌ಡಿಎಮ್‌ಎಸ್ ತಾಂತ್ರಿಕ ಅಧಿಕಾರಿ ಅನಿಲ್ ಆರ್.ನಾಯ್ಕ ಕಾರ್ಯಕ್ರಮದ ಉದ್ದೇಶ, ವಿಜ್ಞಾನ ದಿನಾಚರಣೆಯ ವಿಶೇಷತೆಯ ಕುರಿತು ಪ್ರಾಸ್ತಾವಿಕ ಮಾತನ್ನಾಡಿದರು. ಶಿಕ್ಷಣ ಸಂಯೋಜಕ ಪ್ರಕಾಶ ಚೌಹಾಣ, ನಿವೃತ್ತ ವಿಜ್ಞಾನ ಶಿಕ್ಷಕ ದೇವಿದಾಸ ಸಾವಂತ ಅತಿಥಿಗಳಾಗಿ ಆಗಮಿಸಿದ್ದರು. ಚಿತ್ರಕಲಾ ಶಿಕ್ಷಕರುಗಳಾದ ಆನಂದ ಘಟಕಾಂಬಳೆ, ಅನಿಲ ಮಡಿವಾಳ ಹಾಗೂ ಶಿವಾನಂದ ಬಡಿಗೇರ ತೀರ್ಪುಗಾರರಾಗಿ ಆಗಮಿಸಿದರು.
ಚೆಂಡಿಯಾ ದಿ ಪೊಪ್ಯೂಲರ್ ನ್ಯೂಇಂಗ್ಲಿಷ್ ಸ್ಕೂಲ್ ವಿಜ್ಞಾನ ಶಿಕ್ಷಕ ವೀರಭದ್ರಪ್ಪ ಹೆಚ್.ಎಂ. ಸರ್ವರನ್ನು ಸ್ವಾಗತಿಸಿದರು. ಬಾಡ ಡಿಎಲ್‌ಟಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ರತ್ನಾಕರ ಗೌಡ ವಂದಿಸಿದರು. ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕಿ ಕವಿತಾ ಎಲ್.ಬಾಡಕರ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಒಟ್ಟು 130 ಜನರು ಪಾಲ್ಗೊಂಡಿದ್ದರು.