ಪ್ರಕೃತಿಯ ಮಡಿಲಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಅತ್ಯಂತ ರಮಣೀಯವಾದ ಸ್ಥಳಗಳಲ್ಲಿ ರಾಣಿಝರಿ, ಬಳ್ಳಾಲರಾಯನ ದುರ್ಗ ,ಬಂಡಾಜೆ ವಾಟರ್ ಫಾಲ್ಸ್ ಕೂಡ ಒಂದು. ಇದು ದಕ್ಷಿಣ ಕನ್ನಡದ ಜನರಿಗೆ ಈಗಾಗಲೇ ತಿಳಿದಿರುವಂತಹ ಜಾಗ ಇದಾಗಿದ್ದು ಕರ್ನಾಟಕದ ಬಹುಪಾಲು ಜನರಿಗೆ ಅಪರಿಚಿತವಾಗಿದೆ . ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಸ್ವಲ್ಪ ಹೆಚ್ಚಿನ ನಿಗಾ ವಹಿಸಿದರೆ ಉತ್ತಮ .
ಈ ಪ್ರದೇಶದ ಹಿನ್ನಲೆ ನೋಡುವುದಾದರೆ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನ ಗಡಿಯಲ್ಲಿದ್ದು ಮೂಡಿಗೆರೆ ತಾಲೂಕಿನಲ್ಲಿರುವ ದುರ್ಗದಹಳ್ಳಿ ಗ್ರಾಮದಲ್ಲಿದೆ. ಇಲ್ಲಿ ಹೊಯ್ಸಳ ರಾಜ ಒಂದನೆಯ ವೀರ ಬಲ್ಲಾಳ 12 ನೆಯ ಶತಮಾನದಲ್ಲಿ ಕಟ್ಟಿಸಿದ ಕೋಟೆ ಇದಾಗಿದ್ದು. ಬಲ್ಲಾಳರಾಯನದುರ್ಗ ಎಂಬ ಹೆಸರು ಬಂದಿದೆ . ಇದು ಸಮುದ್ರ ಮಟ್ಟದಿಂದ 1509 ಮೀಟರ್ ಎತ್ತರವಿದ್ದು ಸುತ್ತಲೂ ರಮಣೀಯ ದೃಶ್ಯ ಕಾಣಬರುತ್ತದೆ. ನಾನು ಅಲ್ಲಿ ಹೋದಾಗ ನನಗೆ ಕಂಡುಬಂದಿದ್ದು ಹೇಗೆಂದರೆ ಹೋಗಿ ನಿಂತಾಗ ಸುತ್ತಲೂ ಎಲ್ಲಿ ನೋಡಿದರೂ ರಾಜನು ತನ್ನ ಸಾಮ್ರಾಜ್ಯ ಗಟ್ಟಿಗೊಳಿಸಲು ಹಾಕಿರುವಂತಹ ಗಡಿಗಳು. ಹಾಗೆ ಮೋಡಗಳು ಕೈಗೆ ಎಟಕುವಷ್ಟು ಎತ್ತರದ ಗುಡ್ಡದ ತುಂಬೆಲ್ಲ ತುಂಬಿದ ಮಂಜು ನನ್ನನ್ನು ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು. ಹಾಗೆ ಮೇಲಿನಿಂದ ಕೆಳಕ್ಕೆ ನೋಡಿದಾಗ ಒಮ್ಮೆಲೇ ಮೈ ಜುಮ್ಮೆನ್ನುವ ಅನುಭವ.
ಇಲ್ಲಿಂದ ಮುಂದಿನ ನನ್ನ ಪಯಣ ಬಂಡಾಜೆ ಫಾಲ್ಸ್ ಇದು ಬಲ್ಲಾಳ ರಾಯನ ದುರ್ಗದಿಂದ 4-5 ಕಿಲೋಮೀಟರ್ ದೂರದಲ್ಲಿದೆ ಇಲ್ಲಿನ ವಿಶೇಷವೆಂದರೆ ಇದು ಯಾವುದೇ ನದಿಯಿಂದ ಆದಂತಹ ಜಲಪಾತ ಅಲ್ಲ .ಈ ಜಲಪಾತವನ್ನು ನಾವು ಮೇಲಿನಿಂದಲೇ ನಿಂತು ವೀಕ್ಷಿಸಬೇಕು .ಈ ಜಲಪಾತವನ್ನು ನೋಡುತ್ತಿದಂತೆಯೇ ಆಗುವ ಅನುಭವ ವರ್ಣಿಸಲಸಾಧ್ಯ. ಸುತ್ತಲೂ ಹಸಿರು ಸೌಂದರ್ಯ ,ತಂಪಾದ ನೀರು ,ಹಕ್ಕಿಗಳ ಸುಂದರ ಕಲರವ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವುದಂತೂ ಖಂಡಿತ.
ಆದರೆ ಪ್ರಕೃತಿ ಮೈದುಂಬಿ ಕೊಂಡಿದ್ದರೆ ಮಾತ್ರ ಮಾನವ ಅದನ್ನು ಅನುಭವಿಸಲು ಸಾಧ್ಯ ಆದರೆ ಮನುಷ್ಯ ಇಂದು ಇಂತಹ ಜಾಗಗಳಲ್ಲಿ ಪ್ಲಾಸ್ಟಿಕ್, ಗ್ಲಾಸ್’ಗಳಂತಹ ವಿಷ ಕಸಗಳನ್ನು ಎಸೆದು ಕಲುಷಿತಗೊಳಿಸುತ್ತಿದ್ದಾನೆ. ಇದು ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಇದು ಕೇಳುವ ಕಥೆ ಆಗಿರುತ್ತದೆಯೇ ಹೊರತು ಆ ಸೌಂದರ್ಯ ಅನುಭವಿಸಲು ಸಾಧ್ಯವಿಲ್ಲ
ನನ್ನ ಅನುಭವದ ಪ್ರಕಾರ ಇಲ್ಲಿ ಹೋಗಲು ಸರಿಯಾದ ಸಮಯ ಬೆಳಿಗ್ಗೆ 8 ಗಂಟೆಗೆ ಹೊರಟು ಮೊದಲು ಬಂಡಾಜೆ ಫಾಲ್ಸ್ ನೋಡಿ 3ರಿಂದ 3-15 ಒಳಗೆ ಬಲ್ಲಾಳರಾಯನ ಕೋಟೆಗೆ ಬರುವುದು ಉತ್ತಮ . ಏಕೆಂದರೆ ನಂತರ ಮಂಜು ಮುಸುಕಿ ದಾರಿ ಕಾಣದಾಗಿ ಹಾದಿ ತಪ್ಪುವ ಸಂದರ್ಭ ಹೆಚ್ಚು.
ಹಾಗೇ ಈ ಪ್ರದೇಶವು ಒಂದು ಉತ್ತಮ ಟ್ರೆಕ್ಕಿಂಗ್ ಪ್ರದೇಶವಾದ್ದರಿಂದ ಹೋಗುವ ದಾರಿಯನ್ನು ಪ್ರವಾಸಿಗರಿಗೆ ತಿಳಿಯುವ ಹಾಗೆ ಮಾಡಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರ್ಕಾರ ಇಂತಹ ಪ್ರದೇಶಗಳನ್ನು ಕಾಪಾಡಿಕೊಳ್ಳಲು ಸ್ವಲ್ಪ ಕಠಿಣ ಕ್ರಮಗಳನ್ನು ಕೈ ಗೊಂಡರೆ ಇಂತಹ ಅನೇಕ ಸ್ಥಳಗಳು ಅಭಿವೃದ್ಧಿಗೊಳ್ಳುತ್ತವೆ
ಕೌಶಿಕ್ ಎಸ್ ಹೆಗಡೆ
ಎಸ್.ಡಿ.ಎಂ ಕಾಲೇಜು ಉಜಿರೆ