ಕಾರವಾರ: ನಿನ್ನೆ- ಮೊನ್ನೆವರೆಗೂ ನಾನು ಹಿಂದುವಲ್ಲ, ಹಿಂದು ಧರ್ಮದಲ್ಲಿ ಅಸಮಾನತೆ ಇದೆ, ನಾನು ಹಿಂದುಧರ್ಮದಲ್ಲಿ ಬದುಕಿರುವವನಲ್ಲ ಎಂದು ಕೆಲವರು ಹೇಳಿದ್ದರು. ಆದರೆ ಚುನಾವಣೆ ಸಮೀಪಿಸಿದಾಗ ನಾಮ ಹಾಕಿ, ಕೇಸರಿ ಶಾಲು ಧರಿಸಿಕೊಂಡು ತಿರುಗಾಡುವುದನ್ನ ನೋಡಿದ್ರೆ ದಿಗ್ಭ್ರಮೆಯಾಗುತ್ತದೆ. ಹೀಗಾಗಿ ನಮ್ಮ ಮದ್ಯೆ ಇರುವ ರಾಷ್ಟ್ರ ವಿರೋಧಿ ಮಾನಸಿಕತೆಯ ಜನರನ್ನು ಗುರುತಿಸಬೇಕಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಒಂದು ಕಾಲದಲ್ಲಿ ರಾಷ್ಟ್ರಭಕ್ತರಾದಂತಹ ರಾಜಕೀಯ ಮುಖಂಡರು, ಇಂದು ರಾಷ್ಟ್ರ ಆಳುವ ಗುರಿಯನ್ನಿಟ್ಟುಕೊಂಡೇ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಇಂದು ರಾಷ್ಟ್ರಭಕ್ತ ಯುವಜನಾಂಗ ಸೃಷ್ಟಿಯಾಗಬೇಕಾದ ಅಗತ್ಯತೆ ಇದೆ. ಭಾರತ ಮಾತಾಕೀ ಜೈ ಎನ್ನಬೇಕಾದ ಕೆಲ ದನಿಗಳು, ತಮ್ಮ ಸ್ವಾರ್ಥಕೋಸ್ಕರ ಎಲ್ಲೆಮೀರಿದ ಮಾತನಾಡಿದಾಗ ದಿಗ್ಭ್ರಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ನೆಲದ ಅನ್ನ ತಿಂದವರು, ನೀರು ಕುಡಿದವರು, ಈ ನೆಲಕ್ಕಾಗಿ ತಮ್ಮ ಬದುಕನ್ನು ಸಮರ್ಪಣೆ ಮಾಡುವಂತಿರಬೇಕು. ಆದರೆ ಮಂಗಳೂರಿನಲ್ಲಿ ಈ ನೆಲದ ಪ್ರಜೆಯಾದವರೇ ಕನ್ನಡ ಶಾಲೆಯ ಮಕ್ಕಳ ನಡುವೆ ಕುಕ್ಕರ್‌ನಲ್ಲಿ ಬಾಂಬ್ ಇಡಲು ಮುಂದಾಗಿದ್ದರು. ಇದು ದೇಶದಲ್ಲಿ ಎಂತಹ ಮಾನಸಿಕತೆ ಇರುವ ಜನ ನುಗ್ಗಿದ್ದಾರೆ ಎನ್ನುವ ಆತಂಕ ಮೂಡಿಸುವಂತಿದೆ. ಓರ್ವ ಭಯೋತ್ಪಾದಕನಿಗಿಂತ ಹೆಚ್ಚಾಗಿ ಅವರನ್ನು ಸಮರ್ಥನೆ ಮಾಡುವವರ ಮಾನಸಿಕತೆಯನ್ನು ನಾವು ಗಮನಿಸಬೇಕಾಗಿದೆ. ಕುಕ್ಕರ್‌ನಲ್ಲಿ ಬಾಂಬ್ ಇಟ್ಟುಕೊಂಡು ಹೋದಾಗ ಅಲ್ಲೇ ಸ್ಪೋಟಗೊಂಡ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಕರೆದದ್ದನ್ನು ಕೆಲವರು ವಿರೋಧಿಸಿದ್ದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು, ಮುಂದೆ ಆಗಬೇಕೆಂದು ಅವರ ಹಿಂದೆ ತಿರುಗುವವರಿಗೂ ಕೂಡ ಕುಕ್ಕರ್ ಬಾಂಬ್ ತಂದವರು ಭಯೋತ್ಪಾದಕರಾಗಿ ಕಾಣದಿರುವುದು ದುರದೃಷ್ಟ ಎಂದರು.