ಯಲ್ಲಾಪುರ: ಇಲ್ಲಿನ ನಿಶಾ ಬ್ಯೂಟಿ ಸಲೂನ್ ಮತ್ತು ಮೇಕಪ್ ಸ್ಟುಡಿಯೋ ಮಾಲೀಕರಾದ ಮಮತಾ ಆರ್.ನಾಯ್ಕ ಅವರಿಗೆ ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್‌ನವರು ಕೊಡಮಾಡುವ ಗುರುವೇ ನಮಃ ಅವಾರ್ಡ್ ಘೋಷಿಸಲಾಗಿದೆ. ಫೆ.28ರಂದು ಬೆಂಗಳೂರಿನ ಪ್ರಿನ್ಸೆಸ್ ಶ್ರೈನ್ ಪ್ಯಾಲೇಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವಾರ್ಡ್ ಅನ್ನು ಪ್ರದಾನ ಮಾಡಲಾಗುತ್ತದೆ.
ಮಮತಾ ನಾಯ್ಕ ಕಳೆದ 17 ವರ್ಷದಿಂದ ಯಲ್ಲಾಪುರದಲ್ಲಿ ನಿಶಾ ಬ್ಯೂಟಿ ಸಲೂನ್ ಅಂಡ್ ಮೇಕಪ್ ಸ್ಟುಡಿಯೋ ನಡೆಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣ ಪತ್ರ ಪಡೆದ ಸೌಂದರ್ಯದ ಕೋಚ್ ಆಗಿರುವ ಮಮತಾ, ಕಳೆದ ಹತ್ತು ವರ್ಷದಿಂದ ರೂಡಸೆಟ್ ಮತ್ತು ಆರ್‌ಸಿಟಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬ್ಯೂಟಿ ಮತ್ತು ಡಿಎಸ್‌ಟಿ ಟ್ರೇನರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.
ಮೇಕಪ್ ಆರ್ಟ್ ನಲ್ಲಿ ದೆಹಲಿಯ ಸಂಸ್ಥೆಯಿಂದ ಬೇಸಿಕ್, ಅಡ್ವಾನ್ಸ್ ಹಾಗೂ ಮಾಸ್ಟರ್ಸ್ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮೇಕಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾರೆ. ಅದೇ ವರ್ಷ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಡಲಿಂಗ್ ಶೋದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಹಿಂದೆ ಹಲವಾರು ಸರ್ಕಾರೇತರ ಸಂಘಟನೆಗಳಲ್ಲಿ ಮಮತಾ ನಾಯ್ಕ ಸೇವೆ ಸಲ್ಲಿಸಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ನಡೆಸುವ ಕಾರ್ಯಕ್ರಮದಲ್ಲಿ ಗುರುವೇ ನಮಃ ಅವಾರ್ಡನ್ನು ಸ್ವೀಕರಿಸಲಿದ್ದಾರೆ.