ಕುಮಟಾ: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ 14 ವರ್ಷದೊಳಗಿನ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಇಲ್ಲಿನ ಸುಪ್ರಿಯಾ ಗೌಡ ಗೆಲುವು ದಾಖಲಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಮೈಸೂರಿನ ಚಾಮುಂಡೇಶ್ವರಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ 14 ವರ್ಷದೊಳಗಿನ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸುಪ್ರಿಯಾ ಗೌಡ 400 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಆಯೋಜಕರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕದೊಂದಿಗೆ ಮೈಸೂರು ಪೇಟ ತೊಡಿಸಿ ವಿದ್ಯಾರ್ಥಿನಿಯನ್ನು ಸತ್ಕರಿಸಿದರು.
ಸುಪ್ರಿಯಾ ತಾಲೂಕಿನ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ವಿದ್ಯಾರ್ಥಿಯಾಗಿದ್ದು, ಅಂತ್ರವಳ್ಳಿಯ ಗುಳ್ಳೆಬೈಲ್‌ನ ಕೃಷಿಕ ಎಸ್.ಟಿ.ಗೌಡರ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿನಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ನಾಯ್ಕ ಹಾಗೂ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಜಿ.ಡಿ.ಭಟ್ ಅವರು ವಿಶೇಷ ತರಬೇತಿ ನೀಡಿದ್ದರು. ವಿದ್ಯಾರ್ಥಿನಿಯ ಸಾಧನೆಗೆ ಉಪನಿರ್ದೇಶಕ ಈಶ್ವರ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್.ಭಟ್, ದೈಹಿಕ ಶಿಕ್ಷಕ ಪರಿವೀಕ್ಷಕರು ಹಾಗೂ ಪ್ರಗತಿ ವಿದ್ಯಾಲಯದ ಶಿಕ್ಷಕವೃಂದ ಮತ್ತು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ.