ಯಲ್ಲಾಪುರ: ಕಳೆದ 199 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಿಕ್ಷಕ ಬಂಧುಗಳು ಧರಣಿ ಕುಳಿತು ಜರ್ಜರಿತರಾಗಿದ್ದಾರೆ. ಆದರೂ ಸರ್ಕಾರ ಜಾಣ ಕಿವುಡರಂತೆ ವರ್ತಿಸುತ್ತಿದೆ. ಇದು ಖಂಡನೀಯವಾದದ್ದು, ಇಂತಹ ಸಂದರ್ಭದಲ್ಲಿ ಶಿಕ್ಷಕ ಶಂಕರಪ್ಪ ಬೋರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಭೀರವಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ವಿಶ್ವದರ್ಶನ ಕನ್ನಡ ಮಾಧ್ಯಮ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಹೇಳಿದರು.
ಅವರು ಗುರುವಾರ ಪಟ್ಟಣದ ಶಾಲೆಯಲ್ಲಿ ಕಪ್ಪು ಪಟ್ಟಿ ಧರಿಸಿ ನಿಧನಹೊಂದಿದ ಶಂಕರಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿದ ನಂತರ ಹೇಳಿದರು. 2006ಕ್ಕಿಂತಲೂ ಪೂರ್ವದಿಂದ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದೆವೆ. ಅನೇಕ ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ. ಮುಂದಿನ ಬದುಕು ಗಂಭಿರವಾಗಿದೆ. ಇನ್ನು ಹೆಚ್ಚಿನ ಗಂಭೀರ ಸ್ಥಿತಿಗೆ ಹೋಗುವ ಮುನ್ನ ಸರ್ಕಾರ ತಕ್ಷಣ ಶಿಕ್ಷಕರ ರಕ್ಷಣೆಗೆ, ಬೇಡಿಕೆಗೆ ಸ್ಪಂದಿಸಬೇಕೆಂದು ಅಭಿಪ್ರಾಯಪಟ್ಟರು.
ಶಿಕ್ಷಕರಾದ ಖೈರುನ್ ಶೇಖ್, ಶ್ಯಾಮಲಾ ಕೆರೆಗದ್ದೆ, ಗೀತಾ ಎಚ್., ಪ್ರೇಮಾ ಗಾಂವ್ಕರ್, ಮಹೇಶ ನಾಯ್ಕ, ನವೀನಕುಮಾರ ಮತ್ತು ಜವಾನ ಮಂಜುನಾಥ ಉಪಸ್ಥಿತರಿದ್ದು, ಮೃತ ಶಿಕ್ಷಕನ ಆತ್ಮಕ್ಕೆ ಶಾಂತಿ ಕೋರಿದರು.