ಹೊನ್ನಾವರ: ಪ.ಪಂ. 2023-24ನೇ ಸಾಲಿನ 15.37 ಕೋಟಿ ಅಂದಾಜು ಆದಾಯ, ರೂ.15.33 ಕೋಟಿ ಖರ್ಚುವೆಚ್ಚ ಹಾಗೂ 3.30 ಲಕ್ಷ ರೂ.ಗಳ ಉಳಿತಾಯದ ಆಯವ್ಯಯವನ್ನು ಪ.ಪಂ ಅಧ್ಯಕ್ಷೆ ಭಾಗ್ಯ ಮೇಸ್ತ ಗುರುವಾರ ಮಂಡಿಸಿದರು.
ಮುಂದಿನ ಆರ್ಥಿಕ ವರ್ಷದಲ್ಲಿ ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು, ನಗರ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ ಹಾಗೂ ನಗರ ಸೌಂದರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಪಟ್ಟಣ ಪಂಚಾಯತಿಯ ಆದಾಯ ಮೂಲಗಳಾದ ಆಸ್ತಿ ತೆರಿಗೆ, ನೀರು ಸರಬರಾಜು ಶುಲ್ಕ, ಉದ್ದಿಮೆ ಪರವಾನಗಿ, ಮಳಿಗೆಗಳ ಬಾಡಿಗೆ ಹಾಗೂ ಇತರೆ ಮೂಲಗಳಿಂದ ನಿರೀಕ್ಷಿಸಲಾದ ಆದಾಯದ ಮೇಲೆ ಆಯ-ವ್ಯಯವನ್ನು ತಯಾರಿಸಿದ್ದು, ಸರ್ಕಾರದ ವಿವಿಧ ಅನುದಾನಗಳ ಮೊತ್ತಕ್ಕನುಗುಣವಾಗಿ ಹೊಸ ಯೋಜನೆಗಳನ್ನು ಅಳವಡಿಸಿಕೊಂಡಿರುದಾಗಿ ಮಾಹಿತಿ ನೀಡಿದರು. ಪ್ರಸಕ್ತ ಸಾಲಿನ ಡಿಸೆಂಬರ್ ವರೆಗೆ ಆಸ್ತಿ ತೆರಿಗೆ 74.74 ಲಕ್ಷ ವಸೂಲಾಗಿದ್ದು, ಈ ಬಾರಿ 116.00 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ. ನೀರು ಸರಬರಾಜು ಶುಲ್ಕದಿಂದ 16.14 ಲಕ್ಷ ವಸೂಲಾಗಿದ್ದು, ಈ ಬಾರಿ 43.00 ಲಕ್ಷ ಆದಾಯ ನಿರಿಕ್ಷೀಸಲಾಗಿದೆ. ವಾಣಿಜ್ಯ ಮಳಿಗೆಗಳ ಬಾಡಿಗೆ ಸಾರ್ವಜನಿಕವಾಗಿ ಹರಾಜಿನಿಂದ 13.29 ಲಕ್ಷ ಆದಾಯ ಬಂದಿದ್ದು, ಈ ಬಾರಿ 20.00 ಲಕ್ಷ ಆದಾಯ ನಿರಿಕ್ಷಿಸಲಾಗಿದೆ. ಎಸ್.ಎಫ್.ಸಿ. ಮುಕ್ತ ನಿಧಿ ಅನುದಾನದಡಿ 30ಲಕ್ಷ, 15ನೇ ಹಣಕಾಸು ಅನುದಾನದಿಂದ 90 ಲಕ್ಷ ಅನುದಾನವನ್ನು ಮತ್ತು ಬರಗಾಲ ನಿಧಿಯಡಿ. 5 ಲಕ್ಷ ಅನುದಾನವನ್ನು, ಎಸ್‌ಡಬ್ಲ್ಯೂಎಂ ಘಟಕಕ್ಕಾಗಿ ಹಾಗೂ ಎಸ್.ಬಿ.ಎಂ. ಶೀರ್ಷಿಕೆಯಡಿ ಕೇಂದ್ರ ಸರ್ಕಾರದ ಅನುದಾನ ಸೇರಿ ರೂ 48 ಲಕ್ಷ ಅನುದಾನವನ್ನು ಹಾಗೂ ವಿಶೇಷ ಅನುದಾನ 5 ಲಕ್ಷ, ಪಿಕೆ ಗೃಹಭಾಗ್ಯ & ಹೌಸಿಂಗ್ ಫಾರ್ ಆಲ್ ಯೋಜನೆಯಡಿ 10 ಲಕ್ಷ, ನಲ್ಮ ಯೋಜನೆಯಡಿ 3 ಲಕ್ಷ ಅನುದಾನದ ನಿರೀಕ್ಷೆ ಮಾಡಲಾಗಿದೆ ಎಂದರು.
ಬಜೆಟ್ ಚರ್ಚೆಯಲ್ಲಿ ಸದಸ್ಯರು ಪಾಲ್ಗೊಂಡು ಯಾವುದೇ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಕೇವಲ ಸಭೆ ಮಾಡಿ ಚರ್ಚೆ ಮಾಡುವುದಕ್ಕಷ್ಟೇ ಸಿಮೀತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪಟ್ಟಣದ ವಿವಿದಡೆ ಶೌಚಾಲಯ ಅವ್ಯವಸ್ಥೆಯಿಂದ ಕೂಡಿದೆ. ದಾರಿದೀಪದ ನಿರ್ವಹಣೆ ಸಮರ್ಪಕವಾಗಿಲ್ಲ. ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡುವ ಜೊತೆ ಎರಡು ಹೈ ಮಾಸ್ಕ ಲೈಟ್ ಖರೀದಿಸುವಂತೆ ಆಗ್ರಹ ವ್ಯಕ್ತವಾಯಿತು. ಸದಸ್ಯರ ಆಗ್ರಹಕ್ಕೆ ಮಣಿದು ಖರೀದಿಗೆ ನಿರ್ಣಯಿಸಲಾಯಿತು.
ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ಗೊಂಡ ಇವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಪ.ಪಂ. ಉಪಾಧ್ಯಕ್ಷೆ ನಿಶಾ ಶೇಟ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಮುಖ್ಯಾಧಿಕಾರಿ ಪ್ರವೀಣಕುಮಾರ, ಹಾಗೂ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.