ಮುಂಡಗೋಡ: ಗ್ರಾಮೀಣ ಪ್ರದೇಶಗಳನ್ನು ಸ್ವಚ್ಚ ಹಾಗೂ ಸುಂದರವಾಗಿಡಲು ಸರ್ಕಾರವು ಅನೇಕ ಯೋಜನೆಗಳಡಿ ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಹಳ್ಳಿಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹಳ್ಳಿಗಳನ್ನು ಕೊಳಚೆ ಮುಕ್ತ ಮಾಡಲು ಬಚ್ಚಲು ಗುಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಕೆಲವೆಡೆ ಮನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಚರಂಡಿ ನೀರು ಒಂದೆಡೆ ಸೇರುವಂತೆ ಮಾಡಿ ನೀರನ್ನು ಶುದ್ದಿಕರಿಸಿ ಕೆರೆಗಳಿಗೆ ಸೇರುವಂತೆ ಮಾಡಲು ದ್ರವ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಾಗುತ್ತಿದೆ.
ತಾಲೂಕಿನ ಇಂದೂರು ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿ ಸುಮಾರು 9 ಲಕ್ಷ ವೆಚ್ಚದಲ್ಲಿ “ದ್ರವ ತ್ಯಾಜ್ಯ ನಿರ್ವಹಣಾ ಘಟಕ” ನಿರ್ಮಿಸಲಾಗುತ್ತಿದ್ದು ಸುಮಾರು 300 ಮನೆಗಳ ಚರಂಡಿ ನೀರು ಈ ಘಟಕದಲ್ಲಿ ಶುದ್ದಿಕರಿಸಿ ಕೆರೆಗೆ ಬಿಡಲಾಗುತ್ತಿದೆ. ಉತ್ತಮ ಗುಣಮಟ್ಟದ ಚರಂಡಿಗಳ ನಿರ್ಮಾಣ ಕೂಡಾ ಮಾಡಲಾಗುತ್ತಿದೆ.
ದ್ರವ ತ್ಯಾಜ್ಯ ನಿರ್ವಹಣಾ ಘಟಕದಿಂದ ಚರಂಡಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದ್ದು, ಸ್ವಚ್ಚತೆಯ ಜೊತೆಗೆ ಆರೋಗ್ಯದ ರಕ್ಷಣೆಯೂ ಆಗಲಿದೆ. ಚರಂಡಿ ನೀರು ನೇರವಾಗಿ ಘಟಕಕ್ಕೆ ಸೇರಿಸುವುದರಿಂದ ಕೊಳಚೆ ನೀರಿನಿಂದ ಹೊಲಗಳ ರಕ್ಷಣೆ ಸಾಧ್ಯವಾಗಲಿದ್ದು, ಕೊಳಚೆ ನೀರಿನ ಪುನರ್‌ಬಳಕೆ, ಅಧಿಕ ಮನೆಗಳಿರುವುದರಿಂದ ಅನುಕೂಲವಾಗಲಿದೆ.
ಈ ವೇಳೆ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಪ್ರವೀಣ ಬಿ.ಕಟ್ಟಿ ಮಾತನಾಡಿ, ಇಂದೂರು ಗ್ರಾಮದಲ್ಲಿ ಸಾಧ್ಯತೆ ಇರುವ ಕಡೆಗಳಲ್ಲಿ ಬಚ್ಚಲು ಗುಂಡಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಕೆಲವು ಮನೆಗಳಿಗೆ ಸಾರ್ವಜನಿಕ ಚರಂಡಿ ಮೂಲಕ ದ್ರವ ತ್ಯಾಜ್ಯ ನಿರ್ವಹಣಾ ಘಟಕ ಸೇರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.ಇದು ಇಂದೂರು ಗ್ರಾಮದಲ್ಲಿ ಅತ್ಯಂತ ಅವಶ್ಯಕವಿದ್ದು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದರು.
ಇಂದೂರಲ್ಲಿ ದ್ರವ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ
