Slide
Slide
Slide
previous arrow
next arrow

ಸಮುದ್ರ ಸ್ನಾನಕ್ಕೆ ಪಲ್ಲಕ್ಕಿಯೇರಿ ಕಡಲತೀರಕ್ಕೆ ಬಂದ ಏಳೂರ ದೇವರು

300x250 AD

ಕಾರವಾರ: ಮಹಾಶಿವರಾತ್ರಿಯ ನಂತರದ ಮೊದಲ ಅಮಾವಾಸ್ಯೆಯ ದಿನವಾದ ಇಂದು ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ನೆರವೇರಿತು. ಸುತ್ತಮುತ್ತಲಿನ ಏಳು ಗ್ರಾಮಗಳಿಂದ ದೇವರ ಪಲ್ಲಕ್ಕಿಗಳನ್ನು ಕಡಲಕಿನಾರೆಗೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ಪಾಲ್ಗೊಂಡು ಸಮುದ್ರ ಸ್ನಾನ ಮಾಡುವ ಮೂಲಕ ಉತ್ಸವಕ್ಕೆ ಕಳೆತಂದರು.
ತಾಲೂಕಿನ ಮಾಜಾಳಿಯ ಗಾಂವಗೇರಿಯ ರಾಮನಾಥ ದೇವರ ಜಾತ್ರಾ ಮಹೋತ್ಸವ ಇದಾಗಿದ್ದು, ಪ್ರತಿವರ್ಷ ಶಿವರಾತ್ರಿಯ ಮಾರನೇ ದಿನ ಬರುವ ಅಮವಾಸ್ಯೆಯಂದು ಈ ಉತ್ಸವ ನಡೆಯುತ್ತದೆ. ಗಾಂವಗೇರಿಯ ರಾಮನಾಥ ದೇವರ ಜೊತೆಗೆ ಅಸ್ನೋಟಿಯ ರಾಮನಾಥ, ಮುಡಗೇರಿ ಹಾಗೂ ಅಂಗಡಿಯ ಶಿವನಾಥ, ಹೊಸಾಳಿಯ ಮಹಾದೇವ, ಸದಾಶಿವಗಡದ ಮಹಮ್ಮಾಯ ಮತ್ತು ಕೃಷ್ಣಾಪುರದ ವಿಠ್ಠಲ ರುಕುಮಾಯಿ ದೇವರುಗಳು ಕೂಡ ಕಡಲತೀರದಲ್ಲಿ ಸಮಾಗಮಗೊಂಡು, ಸಮುದ್ರ ಸ್ನಾನದ ಸಂಪ್ರದಾಯ ನೆರವೇರುವುದು ಈ ಜಾತ್ರೆಯ ವಿಶೇಷತೆಯಾಗಿದೆ. ಇನ್ನು ಉತ್ಸವಕ್ಕೆ ಬಂದ ಭಕ್ತರು ಕೂಡ ಸಮುದ್ರ ಸ್ನಾನಗೈದು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವುದು ಈ ಜಾತ್ರೆಯ ವಾಡಿಕೆಯಾಗಿದ್ದು, ಇಂದು ಅದ್ಧೂರಿಯಾಗಿ ಸಾವಿರಾರು ಭಕ್ತರ ಮಾದೇವ್… ಮಾದೇವ್… ಜಯಘೋಷದೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ಶಿವರಾತ್ರಿಯ ದಿನದಂದು ಉಪವಾಸ ಮಾಡುವ ಭಕ್ತರು, ಈ ಉತ್ಸವದ ದಿನ ಸಮುದ್ರಸ್ನಾನ ಮಾಡಿ ಉಪವಾಸ ಬಿಡುವುದು ಇಲ್ಲಿ ಈ ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಈ ಭಾಗದವರು ಎಲ್ಲಿಯೇ ಇದ್ದರೂ ಶಿವರಾತ್ರಿ ವೇಳೆಗೆ ತಮ್ಮ ಊರುಗಳಿಗೆ ವಾಪಸ್ಸಾಗಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಈ ಉತ್ಸವದ ಮತ್ತೊಂದು ವಿಶೇಷತೆಯಾಗಿದೆ. ಈ ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಸಹ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಇದೇ ವೇಳೆ, ಏಳು ಗ್ರಾಮಗಳ ದೇವರ ಪಲ್ಲಕ್ಕಿಗಳು ಬರುವ ಹಾದಿಯಲ್ಲಿ ಹಾಸಿಡಲಾಗುವ ಸೀರೆಗಳಿಗೆ ಭಕ್ತರು ಅಕ್ಕಿ ಹಾಗೂ ನಾಣ್ಯಗಳನ್ನು ಬೀರಿ ಪಡಿ ಕೊಡುವ ಪದ್ಧತಿಯೂ ನಡೆಯಿತು. ಇದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದ್ದು, ಈಗಲೂ ರೂಢಿಯಲ್ಲಿದೆ. ಈ ಆಚರಣೆಯಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

300x250 AD
Share This
300x250 AD
300x250 AD
300x250 AD
Back to top