ಕುಮಟಾ: ಶಿವನ ಆತ್ಮ ಲಿಂಗವಿರುವ ಪಂಚ ಕ್ಷೇತ್ರಗಳಲ್ಲೊಂದಾದ ತಾಲೂಕಿನ ಧಾರೇಶ್ವರದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಬೆಳಗ್ಗೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ಆತ್ಮ ಲಿಂಗಕ್ಕೆ ಕುಂಭಾಭಿಷೇಕಗೈದು ದರ್ಶನ ಪಡೆದರು.
ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಸ್ವತಃ ಭಕ್ತರೇ ಶಿವನಿಗೆ ಕುಂಭಿಷೇಕ ಮಾಡುವ ಪುಣ್ಯಾವಕಾಶ ಕಲ್ಪಿಸಲಾಗಿತ್ತು. ಗರ್ಭಗುಡಿಯ ಹೊರಭಾಗದಲ್ಲಿ ಅರ್ಚಕರ ಮುಖೇನ ಸಂಕಲ್ಪ ಗೈದು ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸಹಸ್ರಾರು ಭಕ್ತರು ಬೆಳಗ್ಗೆಯಿಂದ ಸಂಜೆ ವರೆಗೂ ಧಾರನಾಥೇಶ್ವರನ ದರ್ಶನ ಪಡೆದ ಕೃತಾರ್ಥರಾದರು.
ಭಕ್ತರ ಸರದಿ ದೇವಸ್ಥಾನದ ಮಹಾದ್ವಾರದ ಹೊರ ಭಾಗದ ವರೆಗೂ ತಲುಪಿತ್ತು. ದೇವರ ದರ್ಶನ ಪಡೆದು ಬರುವ ಭಕ್ತರಿಗೆ ಗುಡಬಳ್ಳಿಯ ಗಣಪತಿ ಕೃಷ್ಣ ರಾಯ್ಕರ ತಂಡದಿಂದ ಪಾನಕದ ವ್ಯವಸ್ಥೆ ಮಾಡಿದ್ದರು. ಅಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸಕಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿತ್ತು.