ಕಾರವಾರ: ತಾಲೂಕಿನ ಶೇಜವಾಡದ ಶ್ರೀಕ್ಷೇತ್ರ ಶೆಜ್ಜೇಶ್ವರ ದೇವಾಲಯದಲ್ಲೂ ಭಕ್ತರು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವುದು ಕಂಡುಬಂತು. ಬೆಳಿಗ್ಗೆ 4ರಿಂದ ಆರಂಭಗೊಂಡಿದ್ದ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿಯವರೆಗೂ ಮುಂದುವರಿದಿತ್ತು. ಶಿವರಾತ್ರಿ ನಿಮಿತ್ತ ಉಪವಾಸ ವ್ರತ ಕೈಗೊಂಡಿದ್ದ ಅನೇಕರು ಮಧ್ಯರಾತ್ರಿಯವರೆಗೂ ಹಮ್ಮಿಕೊಂಡಿದ್ದ ಶಿವನಾಮ ಜಾಗರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶೆಜ್ಜೇಶ್ವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಗರ್ಭಗುಡಿಯ ಒಳಗೆ ಪ್ರವೇಶಿಸಿ, ಆತ್ಮಲಿಂಗಕ್ಕೆ ಅಭಿಷೇಕ ಮಾಡಿಸುವ ಕ್ರಮಕ್ಕೆ ಇತ್ತೀಚಿನ ವರ್ಷಗಳಲ್ಲಿ ನಿರ್ಬಂಧ ಹೇರಲಾಗಿದೆ. ಹೀಗಾಗಿ, ಭಕ್ತಾದಿಗಳು ತಂದಿದ್ದ ಎಳನೀರು, ಹಾಲನ್ನು ದೇವಸ್ಥಾನದ ಅರ್ಚಕರೇ ಆತ್ಮಲಿಂಗಕ್ಕೆ ಅಭಿಷೇಕ ಮಾಡಿಸಿ, ಸಂಕಲ್ಪಿಸಿ ಪ್ರಸಾದ ವಿತರಣೆ ಮಾಡಿದರು. ಕೆಲವು ಭಕ್ತರು, ಶಿವಲಿಂಗದ ಎದುರು ಇರುವ ನಂದಿಯ ವಿಗ್ರಹಕ್ಕೆ ಅಭಿಷೇಕ ಮಾಡಿ ಕೃತಾರ್ಥರಾದರು.