ಮುಂಡಗೋಡ: ಫೆ.20ರಂದು ತಾಲೂಕಿನ ಮಳಗಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಭೋವಿ ಸಮಾಜದ ಜನಜಾಗೃತಿ ಸಮಾವೇಶವನ್ನು ಜಿಲ್ಲೆಯ ಎಲ್ಲ ಮುಖಂಡರು ಸೇರಿ ಅಚ್ಚುಕಟ್ಟಾಗಿ ನಡೆಸಕೊಡಬೇಕು ಎಂದು ಭೋವಿ ಸಮಾಜದ ತಾಲೂಕು ಅಧ್ಯಕ್ಷ ಹನಮಂತ ಆರೇಗೊಪ್ಪ ಕರೆನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ಸಮಾಜ ಬೇಡಿಕೊಂಡು ಜೀವನ ಸಾಗಿಸಿಲ್ಲ, ದುಡಿದು ಕೆಲಸಮಾಡಿ ಜೀವನ ಸಾಗಿಸಿದೆ. ಭೋವಿ ಸಮಾಜವನ್ನು ಇತರೆ ಸಮಾಜದವರು ನಮ್ಮ ಕೆಲಸಕಾರ್ಯಗಳನ್ನು ನೋಡಿ ಗುರುತಿಸುವಂತೆ ಮಾಡಬೇಕು. ನಮ್ಮ ಸಮಾಜದಿಂದ 5- 6 ವರ್ಷಗಳಿಂದ ಸಣ್ಣಪುಟ್ಟ ಕಾರ್ಯಕ್ರಮಗಳು ನಡೆದಿವೆ. ಆದರೆ ಮಳಗಿಯಲ್ಲಿ ನಡೆಯುತ್ತಿರುವ ಈ ಜನಜಾಗೃತಿ ಸಮಾವೇಶವು ತಾಲೂಕಿನಲ್ಲಿ ಬೆಳ್ಳಿಹಬ್ಬದಂತೆ ಆಗಬೇಕು. ಸಮಾವೇಶದಿಂದ ಸಮಾಜಕ್ಕೆ ಒಳ್ಳೆ ಸಂದೇಶ ಹೋಗಬೇಕು ಎಂದರು.
ಭೋವಿ ಸಮಾಜದ ಮುಖಂಡ ಶಿರಸಿಯ ಶಿವಾನಂದ ದೇಸಳ್ಳಿ ಮಾತನಾಡಿ, ಸಮಾವೇಶದ ಸಾನಿಧ್ಯ ವಹಿಸಲು ಭೋವಿ ಸಮಾಜದ ಜಗದ್ಗುರು, ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹಾಗೂ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಅವರು ಆಗಮಿಸಿದಲಿದ್ದಾರೆ. ಕಾರ್ಯಕ್ರಮಕ್ಕೆ ರಾಷ್ಟ್ರೀಯ ಓಸಿಸಿಐ ಅಧ್ಯಕ್ಷ ಡಾ.ಆರ್.ಎಚ್.ರವಿ ಮಾಕಳೆ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ಭೋವಿ ಸಮಾಜದ ಜಿಲ್ಲಾಧ್ಯಕ್ಷ ಶಿವಾಜಿ ಆರ್.ಬಂಡಿವಾಡ ವಹಿಸಲಿದ್ದಾರೆ ಎಂದು ತಿಳಿಸಿದರು.
ಭೋವಿ ಸಮಾಜದ ಮಾಜಿ ಅಧ್ಯಕ್ಷ ಸುಭಾಸ ವಡ್ಡರ್, ಪ್ರಮುಖರಾದ ನಾಗರಾಜ ವಡ್ಡರ, ಧರಮಣ್ಣಾ ಭೋವಿ, ಪರಶುರಾಮ ಕರ್ಜಗಿ, ಪಲ್ಲಪ್ಪ ಭೋವಿ, ಮಾರುತಿ ಮಠ್ಠೇರ, ಅಣ್ಣಪ್ಪಾ ಭೋವಿ, ಗುರಪ್ಪಾ ಭೋವಿ, ರಾಮೂ ಭೋವಿ, ಹನಮಂತ ಭೋವಿ, ಮಾರುತಿ ಭೋವಿ, ಶಶಿಕುಮಾರ ಭೋವಿ, ರಾಜೇಶ ಭೋವಿ, ದಿನೇಶ ಭೋವಿ ಮುಂತಾದವರು ಇದ್ದರು.