ಕಾರವಾರ: ಕೆಪಿಸಿ ಗುತ್ತಿಗೆ ನೌಕರರಿಗೆ ಸರಕಾರದ ನಿಯಮದಂತೆ ಹೆಚ್ಚುವರಿ ವೇತನ, ಇಎಸ್‌ಐ, ಪಿಎಫ್ ವಂತಿಗೆ ಹನ್ನೆರಡು ದಿನದೊಳಗೆ ನೀಡುತ್ತೇನೆ ಎಂದು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿಯೂ ಕೆಪಿಸಿ ಗುತ್ತಿಗೆ ಸಂಸ್ಥೆ ‘ಬನಶಂಕರಿ’ ಮಾಲಕ ಸತಾಯಿಸಿತಿರುವುದು ಸಹಿಸಲಸಾಧ್ಯ ಎಂದು ಮಾಜಿ ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಸಿ ಕೊಡಸಳ್ಳಿ ಇಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 65 ಮಂದಿ ಗುತ್ತಿಗೆ ಕಾರ್ಮಿಕರಿಗೆ ಬನಶಂಕರಿ ಎಂಬ ಗುತ್ತಿಗೆ ಸಂಸ್ಥೆ ಕಳೆದ ಒಂದು ವರ್ಷದಿಂದ ಹೆಚ್ಚುವರಿ ವೇತನ, ಇಎಸ್‌ಐ ಮುಂತಾದ ಇತರ ಸವಲತ್ತು ನೀಡದೆ ಸತಾಯಿಸುತ್ತಿದ್ದರು. ಮಾಜಿ ಶಾಸಕ ಸತೀಶ ಸೈಲ್ ಹಲವಾರು ಬಾರಿ ಕೆಪಿಸಿ ಕಚೇರಿ ಮುಂದೆ ಧರಣಿ ನಡೆಸಿದ್ದರೂ ಫಲಕಾರಿ ಆಗಲಿಲ್ಲ. ಇದರಿಂದ ಬೇಸತ್ತ ಗುತ್ತಿಗೆ ಕಾರ್ಮಿಕರು ಕಳೆದ ಒಂದನೇ ತಾರೀಖಿನಿಂದ ಕದ್ರಾ ಕೆಪಿಸಿ ಕಚೇರಿ ಮುಂದೆ ಧರಣಿ ಪ್ರಾರಂಭಿಸಿದ್ದರು.
ಈ ಹಂತದಲ್ಲಿ ಸೈಲ್ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿ ಸಮಸ್ಯೆ ಬಗೆಹರಿಸಲು ವಿನಂತಿಸಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮತ್ತು ಇಎಸ್‌ಐ, ಪಿಎಫ್ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಿದ್ದರು. ಈ ಎಲ್ಲಾ ಅಧಿಕಾರಿಗಳು ಮತ್ತು ಕೆಪಿಸಿ ಹಿರಿಯ ಅಧಿಕಾರಿಗಳು ಸೈಲ್ ಮತ್ತು ಕಾರ್ಮಿಕ ನಾಯಕರ ಸಹಭಾಗಿತ್ವದಲ್ಲಿ ಸಂಧಾನ ಮಾತುಕತೆ ನಡೆಸಿ, ಫೆ.13ರ ಒಳಗೆ ಎಲ್ಲಾ ಸವಲತ್ತನ್ನು ಗುತ್ತಿಗೆ ಕಾರ್ಮಿಕರಿಗೆ ನೀಡುವುದಾಗಿ ಗುತ್ತಿಗೆದಾರ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಬರೆದುಕೊಟ್ಟ ಬಳಿಕ ಮುಷ್ಕರ ಹಿಂಪಡೆಯಲಾಗಿತ್ತು.
ಆದರೆ ಇದೀಗ ಗುತ್ತಿಗೆದಾರ ಕೇವಲ ಹೆಚ್ಚುವರಿ ವೇತನೆ ಮಾತ್ರ ನೀಡಿ ಉಳಿದ ಸವಲತ್ತನ್ನು ನೀಡದೆ ವಚನ ಭ್ರಷ್ಟರಾಗಿ ಗುತ್ತಿಗೆ ಕಾರ್ಮಿಕರಿಗೆ ವಂಚಿಸುತ್ತಿದ್ದಾರೆ ಎಂದು ಸೈಲ್ ಕಿಡಿಕಾರಿದ್ದಾರೆ. ಒಂದುವೇಳೆ ಕೆಲವೇ ದಿನದೊಳಗೆ ಕಾರ್ಮಿಕರಿಗೆ ಈ ಸವಲತ್ತು ನೀಡದಿದ್ದರೆ ಈ ಕುರಿತು ಕದ್ರಾ ಕೆಪಿಸಿ ಕಚೇರಿ ಎದುರು ಹೋರಾಟ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಪಿಸಿ ಗುತ್ತಿಗೆ ನೌಕರರಿಗೆ ಇಎಸ್‌ಐ ನೀಡದ ಗುತ್ತಿಗೆದಾರ: ಸೈಲ್ ಅಸಮಾಧಾನ
