Slide
Slide
Slide
previous arrow
next arrow

ಲಯಕರ್ತ ಶಿವನೆದುರು ಬೆಳಗಿದ ದೀಪ ಆರೋಗ್ಯ,ಜ್ಞಾನ, ಶಾಂತಿ ನೀಡಲಿ: ಜಿ.ಟಿ.ಹೆಗಡೆ

300x250 AD

ಶಿರಸಿ : ಜ್ಞಾನ, ಬೆಳಕು ನೀಡುವುದು ದೀಪ. ವೇದ ಕಾಲದಿಂದಲೂ ಭಾರತೀಯರು ಶುಭ ಸಂದರ್ಭಗಳಲ್ಲಿ ದೀಪ ಬೆಳಗುವುದು ಪದ್ಧತಿ. ಆ ದೀಪವನ್ನು ಶಿವನೆದುರು ಬೆಳಗಿದ್ದೇವೆ. ಶಿವ ಎಂದರೆ ಭಾರತೀಯರಲ್ಲಿ ಲಯಕರ್ತ ಎನ್ನುವುದು. ಅದೇ ಸಂದರ್ಭದಲ್ಲಿ ಶಿವ ನಮಗೆಲ್ಲರಿಗೂ ಆರೋಗ್ಯ ನೀಡುವ, ಜ್ಞಾನ, ಭಕ್ತಿ ಮೂಡಿಸುವ ಕೆಲಸ ಮಾಡುತ್ತಾನೆ, ಎಂದು ಹಿರಿಯ ಸಹಕಾರಿ, ಸಹಕಾರಿ ರತ್ನ ಜಿ.ಟಿ.ಹೆಗಡೆ ತಟ್ಟೀಸರ ಹೇಳಿದರು.


ಅವರು ಶುಕ್ರವಾರ ಸಂಜೆ ನಗರದ ವ್ಯಾಯಾಮ ಶಾಲೆಯ ಮೈದಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ 4 ದಿನಗಳ ಕಾಲ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿರುವ ಕೋಟಿ ಶಿವಲಿಂಗ ದರ್ಶನ, ಹಲೋಗ್ರಾಫಿಕ್ ಶಿವದರ್ಶನ, ಭಾರತದ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, ಮ್ಯಾಜಿಕ್ ಆಫ್ ಮೆಡಿಟೇಶನ್ ಹಾಗೂ ರಾಜಯೋಗ ಚಿತ್ರ ಪ್ರದರ್ಶನ ವಿಶೇಷ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಿಎಸ್‌ಪಿ ಕೆ.ಎಲ್.ಗಣೇಶ ಮಾತನಾಡುತ್ತಾ, ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಯಕ್ರಮದ ಸ್ಥಳಕ್ಕೆ ಕಾಲಿಟ್ಟಾಗ ಒಂದು ಸಕಾರಾತ್ಮಕ ಶಕ್ತಿ ಕಾಣುತ್ತದೆ. ಹೋಮ, ಹವನದ ಸ್ಥಳಕ್ಕೆ ಹೋದಂತೆ ಅನಿಸುತ್ತದೆ. ಒತ್ತಡಕ್ಕೆ ಸಿಲುಕಬೇಡಿ, ಶಾಂತಿಯಿಂದ ಜೀವನ ನಡೆಸಿ ಎನ್ನುವುದು ಸಂಸ್ಥೆಯ ಮುಖ್ಯವಾದ ಸಂದೇಶವಾಗಿದೆ. ವ್ಯರ್ಥವಾಗಿ ಪೈಪೋಟಿ ಮಾಡಿ ಅನವಶ್ಯಕ ಒತ್ತಡಕ್ಕೆ ಸಿಲುಕಿಕೊಳ್ಳದೇ ಸತ್ ಚಿಂತನೆಯಿಂದ ಉತ್ತಮ ಜೀವನಕ್ಕೆ ಶಾಂತಿಯುತ ಜೀವನಕ್ಕೆ ಸಂಸ್ಥೆಯ ಸಂದೇಶ ಅನುಕರಣೀಯ. ಅದರಂತೆ ನಡೆದರೆ ಬದುಕು ಶಾಂತಿಯಿಂದ ಸಾಗುವುದರಲ್ಲಿ ಸಂಶಯವಿಲ್ಲ, ಎಂದರು.
ಸೇಂಟ್ ಅಂಥೋನಿ ಚರ್ಚನ ಫಾದರ ಜಾನ್ ಮಾತನಾಡುತ್ತಾ, ಈ ಸಮಾಜಕ್ಕೆ ಬೇಕಾಗಿರುವುದು ಶಾಂತಿ, ಸಮಾಧಾನ. ಅದು ಇಲ್ಲವಾದರೆ ಸಮಾಜದಲ್ಲಿ, ಕುಟುಂಬದಲ್ಲಿ ನಡೆಸುವ ಜೀವನ ಅರ್ಥವಿಲ್ಲದಂತಾಗುತ್ತದೆ. ಬದುಕಿಗೆ ಅಗತ್ಯವಾದ ಶಾಂತಿ, ಸಮಾಧಾನ ಹರಡಲು ಸಂಸ್ಥೆ ಶ್ರಮಿಸುತ್ತಿದೆ. ಅದು ಪ್ರಶಂಸನೀಯ. ಗಾಳಿ ಬಂದಾಗ ಬೆಳಕು ಆರುತ್ತದೆ. ಜಗತ್ತಿಗೆ, ಸಮಾಜಕ್ಕೆ ಪ್ರತಿ ವ್ಯಕ್ತಿ ಬೆಳಕು ತರುವ ವ್ಯಕ್ತಿ ಆಗಬೇಕು. ಸಮಾಜದ ಬೆಳಕನ್ನು ದುಷ್ಟ ಶಕ್ತಿ ಆರಿಸಿಬಿಟ್ಟಿದೆ. ಅದನ್ನು ಬದಲಾಯಿಸಬೇಕು. ದೇವರು ಹೆಸರು ಬೇರೆಯಾದರೂ ನಮ್ಮನ್ನು ಸೃಷ್ಠಿಸಿದ, ರಕ್ಷಿಸಿದ, ಈ ಜೀವನ ಮುಗಿಸಿದ ನಂತರ ಮುಖಾಮುಖಿ ನೀಡಬೇಕಿರುವ ದೇವರು ಇಲ್ಲಿ ಉಪಸ್ಥಿತನಿದ್ದು ನೋಡುತ್ತಿದ್ದಾನೆ. ಆ ದೇವರಲ್ಲಿ ಈ ಸಮಾಜ, ಕುಟುಂಬಗಳ ಶಾಂತಿಗೆ ಆಶೀರ್ವದಿಸು ಎಂದು ಪ್ರಾರ್ಥಿಸುತ್ತೇನೆ, ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಮಾತನಾಡುತ್ತಾ, ಮನುಷ್ಯ ಒಂದು ಜೀವಿ. ಒಳ್ಳೆಯ ಬದುಕಿಗಾಗಿ ಬೇರೆಯವರ ಬದುಕಿನಲ್ಲಿ ಅಶಾಂತಿ ಸೃಷ್ಠಿಸುವಂತಹ ಮನಸ್ಥಿತಿ ಯಾರಿಗೂ ಇರಬಾರದು. ಈ ವಾತಾವರಣ ಮನಪರಿವರ್ತನೆಗಾಗಿ ಇರುವ ಅವಕಾಶ, ಎಂದರು.
ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳದ ಸದಸ್ಯ ಎಸ್.ಪಿ.ಶೆಟ್ಟಿ ಮಾತನಾಡುತ್ತಾ, ಮನಃಪರಿವರ್ತನೆಗೆ ಸಮಾಜದ ಶಾಂತಿಗೆ, ಕುಟುಂಬದ ನೆಮ್ಮದಿಯ ಬದುಕಿಗೆ ಈಶ್ವರೀಯ ವಿಶ್ವವಿದ್ಯಾಲಯದ ಚಿಂತನೆ ಸಹಾಯವಾಗಲಿದೆ. ಇಂದಿನ ಸಮಾಜದಲ್ಲಿಯ ಜಟಿಲ ಸಮಸ್ಯೆಗಳನ್ನು ಸರಳ ಮಾಡಿಕೊಳ್ಳಲು ಈ ಸಂಸ್ಥೆಯ ಮಾರ್ಗದರ್ಶನ ಉಪಯುಕ್ತವಾಗಲಿದೆ, ಎಂದು ಹೇಳಿದರು.
ಡಿಎಫ್‌ಓ ಅಜ್ಜಯ್ಯ ಮಾತನಾಡುತ್ತಾ, ಪ್ರತಿ ವ್ಯಕ್ತಿಯಲ್ಲಿ ಆಧ್ಯಾತ್ಮ ಚಿಂತನೆ ಮತ್ತು ಮನಸ್ಸಿನ ಶಾಂತಿಯ ಮೂಲಕ ಜೀವನದ ಸಂಘರ್ಷದಿಂದ ಹೊರಬರುವಂತೆ ಸಂಸ್ಥೆಯು ಶಿಕ್ಷಣ ನೀಡುತ್ತದೆ. ಎಲ್ಲ ಜಾತಿ, ಧರ್ಮಗಳ ಹೊರತಾಗಿರುವ ಆಧ್ಯಾತ್ಮ ಮತ್ತು ನೈತಿಕ ಚಿಂತನೆ ಬಿತ್ತುವ ಕೆಲಸ ಮಾಡುತ್ತಿದೆ, ಎಂದರು.
ಶ್ರೀಪಾದ ಹೆಗಡೆ ಕಡವೆ ಮಾತನಾಡುತ್ತಾ, ಸ್ವತಃ ನಮ್ಮ ಆಂತರಿಕ ಚಿಂತನೆ ಮಾಡಿಕೊಂಡಾಗ ನಮ್ಮಲ್ಲಿರುವ ನ್ಯೂನ್ಯತೆಗಳ, ವಿಕಾರಗಳ ಅರಿವನ್ನು ಪಡೆಯಲು ಸಾಧ್ಯವಾಗುತ್ತದೆ. ಇಂದಿನ ಯುವಪೀಳಿಗೆ ಆಂತರಿಕ ಪರಿಶೋಧ ಅರಿತು ಸಮಾಜದಲ್ಲಿ ಶಾಂತಿ, ಸಮಾಧಾನ ತರಲು ಸಾಧ್ಯವಾಗಲಿದೆ, ಎಂದು ನುಡಿದರು.
ಈ ಸಂದರ್ಭದಲ್ಲಿ ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ವಿ.ಜಿ.ಭಟ್ಟ, ನಿವೃತ್ತ ಪ್ರೊಫೆಸರ್ ಡಾ.ವಿಜಯನಳಿನಿ ರಮೇಶ, ಬಿ.ಕೆ.ವೀಣಾಜಿ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಭಾಕರ ಶಿರಾಲಿ ಸ್ವಾಗತಿಸಿದರು.

300x250 AD
Share This
300x250 AD
300x250 AD
300x250 AD
Back to top