ಶಿರಸಿ: ಪಾಶ್ಚಾತ್ಯ ಸಂಸ್ಕೃತಿಗಿಂತ ನಮ್ಮ ಸಂಸ್ಕೃತಿಯಲ್ಲಿ ಗುರುತಿಸಿಕೊಳ್ಳುವದು ಶ್ರೇಷ್ಠ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶನಿವಾರ ಅವರು ಅಖಿಲ ಹವ್ಯಕ ಮಹಾ ಸಭಾ ಹಾಗೂ ಆದರ್ಶ ವನಿತಾ ಸಮಾಜ ಜಂಟಿಯಾಗಿ ಹಮ್ಮಿಕೊಂಡ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹವ್ಯಕ ಭಾಷೆ, ಸಂಸ್ಕೃತಿ ವಿಶಿಷ್ಟವಾಗಿದೆ.ಇದನ್ನು ಉಳಿಸಿ ಬೆಳೆಸಬೇಕು. ಹವ್ಯಕ ಮಹಾಸಭಾ ಅನೇಕ ಬೇಡಿಕೆ ಇಟ್ಟಿದ್ದು, ಅದನ್ನೂ ಮಾಡಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಯಾವುದೇ ಅಭಿವೃದ್ದಿ ನಿರಂತರ. ಅದಕ್ಕೆ ಬೆಂಬಲವಾಗಿ ಕೆಲಸ ಮಾಡಲಾಗುತ್ತದೆ ಎಂದ ಅವರು, ಯಾವುದೇ ಸಮಾಜವಾಗಲೀ ಕೇವಲ ತಮ್ಮ ಸಮಾಜಕ್ಕಾಗಿ ಸಂಘಟಿತರಾಗದೇ ರಾಷ್ಟ್ರದ ಐಕ್ಯತೆಯ ದೃಷ್ಟಿಯಿಂದಲೂ ಸಂಘಟಿತರಾಗಬೇಕು ಎಂದರು.
ಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ, ನಮ್ಮ ಸಮಾಜ ಕುಂದುತ್ತಿದೆ. ನಮ್ಮದೇ ಭಾಷೆ, ಸಂಸ್ಕೃತಿ ಇದೆ. ನಮ್ಮ ಪ್ರಬುದ್ಧತೆ ಜೊತೆಯಲ್ಲಿ ಉಳಿದವರನ್ನು ಬೆಂಬಲಿಸಬೇಕು. ಹವ್ಯಕರು ತುಳಿತಕ್ಕೆ ಒಳಗಾದರೂ ಪ್ರತಿಭಟನೆ ಇಲ್ಲ. ಹವ್ಯಕ ಜನ ಪ್ರತಿನಿಧಿಗಳು ನಮಗೂ ಮೀಸಲಾತಿ ನೀಡಬೇಕು ಎಂದರು.
ಲಯನ್ಸ ಶಿಕ್ಷಣ ಎನ್.ವಿ. ಜಿ ಭಟ್ಟ, ಹವ್ಯಕರನ್ನು ಬೆಂಬಲಿಸಬೇಕು ಎಂದರು.
ಪ್ರಮುಖರಾದ ಕೆ.ಬಿ.ಲೋಕೇಶ ಹೆಗಡೆ, ಹವ್ಯಕತ್ವ ಉಳಿಸಿಕೊಳ್ಳಬೇಕು ಎಂದರು.
ಅಖಿಲ ಹವ್ಯಕ ಮಹಾ ಸಭೆಯ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ, ಪ್ರಮುಖರಾದ ಶ್ರೀಧರ ಭಟ್ಟ ಕೆಕ್ಕಾರ, ಪ್ರಶಾಂತ ಭಟ್ಟ, ವಿ.ಎಂ.ಹೆಗಡೆ ಆಲ್ಮನೆ ಇತರರು ಇದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.
ವಿವಿಧ ಕ್ಷೇತ್ರದ ಸಾಧಕರಾದ ಶ್ರೀನಿವಾಸ ಹೆಬ್ಬಾರ, ವೈಶಾಲಿ ವಿ.ಪಿ.ಹೆಗಡೆ, ಗಣಪತಿ ಭಟ್ಟ, ನರ್ಮದಾ ಹೆಗಡೆ, ನಾರಾಯಣ ಭಟ್ಟ ಅವರನ್ನು ಗೌರವಿಸಲಾಯಿತು.
ಇದೇ ವೇಳೆಗೆ ಎಲ್.ಆರ್.ಭಟ್ಟ ದಂಪತಿಗಳು ಮಹಾ ಸಭೆಗೆ ವಿದ್ಯಾಪ್ರೋತ್ಸಾಹ ಧನ 25 ಸಾವಿರ ರೂ. ನೀಡಿದರು.