ದಾಂಡೇಲಿ: ಹಳಿಯಾಳ ತಾಲೂಕಿನ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನ ಕೇಂದ್ರ ಶಿರಸಿ ಇವುಗಳ ಸಂಯುಕ್ತಾಶ್ರಯದಡಿ ತಾಟಗೇರಾದ ಶ್ರೀಮಾರುತಿ ದೇವಸ್ಥಾನದ ಆವರಣದಲ್ಲಿ ಕಬ್ಬಿನ ಬೆಳೆಯಲ್ಲಿ ಅಧಿಕ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ತರಬೇತಿ ಕಾರ‍್ಯಕ್ರಮವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ತರಬೇತಿ ಕಾರ‍್ಯಕ್ರಮವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎ.ಎಸ್.ವಸ್ತ್ರದ ಅವರು ಉದ್ಘಾಟಿಸಿ, ಇಂದು ಆಧುನಿಕತೆ ಶರವೇಗದಲ್ಲಿ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿಯಲ್ಲೂ ಮಹತ್ವದ ಬದಲಾವಣೆಯಾಗಬೇಕಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಕೃಷಿ ಬೆಳೆಯಲ್ಲಿ ದೊರೆತಾಗ ಮಾತ್ರ ಕೃಷಿ ಚಟುವಟಿಕೆಗಳು ನಿರಂತರವಾಗಿ ಮತ್ತು ಸುಲಲಿತವಾಗಿ ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕಬ್ಬಿನ ಬೆಳೆಯಲ್ಲಿ ಅಧಿಕ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಹಮ್ಮಿಕೊಂಡಿರುವ ತರಬೇತಿ ಕಾರ‍್ಯಕ್ರಮ ಇಲ್ಲಿಯ ರೈತರಿಗೆ ಮಹತ್ವಪೂರ್ಣವಾಗಿದೆ ಎಂದರು.
ಅಧ್ಯಕ್ಷತೆಯನ್ನು ಸ್ಥಳೀಯ ಪ್ರಗತಿಪರ ಕೃಷಿಕರಾದ ಮಹಾದೇವ ಅಪ್ಪರಾವ್ ವಾಟ್ಲೇಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಶಿವಶಂಕಮೂರ್ತಿ.ಎಂ ಮತ್ತು ಡಾ.ರೂಪಾ ಪಾಟೀಲ್ ಅವರು ಭಾಗವಹಿಸಿ ಕೃಷಿಯಲ್ಲಿ ತಾಂತ್ರಿಕತೆಯನ್ನು ಬಳಸಿಕೊಳ್ಳಬೇಕಾದ ಅನಿವಾರ‍್ಯತೆಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ಕೃಷಿ ಚುಟವಟಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದ್ದು, ಆ ಬದಲಾವಣೆಗೆ ನಾವು ಹೊಂದಿಕೊಂಡು ಮುಂದಡಿಯಿಬೇಕೆಂದು ಕರೆ ನೀಡಿದರು.
ಪ್ರಗತಿಪರ ಕೃಷಿಕ ಮಹಾವೀರ ನೇರ್ಲೆಕರ್ ಸ್ವಾಗತಿಸಿದ ಕಾರ‍್ಯಕ್ರಮಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳಾದ ಪಿ.ಎಸ್.ಚಿಕ್ಕಮಠ ವಂದಿಸಿದರು. ರಾಮಕೃಷ್ಣ ಸುಬ್ಬಣ್ಣವರ ಕಾರ‍್ಯಕ್ರಮವನ್ನು ನಿರೂಪಿಸಿದರು. ಸಂಕೇಶ್ವರದ ಕಬ್ಬು ಸಂಶೋಧನಾ ಕೇಂದ್ರದ ತಳಿ ವಿಜ್ಞಾನಿ ಡಾ.ಸಂಜಯ್ ಪಾಟೀಲ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅಗತ್ಯ ಮಾಹಿತಿ, ಮಾರ್ಗದರ್ಶನವನ್ನು ನೀಡಿದರು. ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಮಹಾವೀರ ನೇರ್ಲೆಕರ್, ನಾರಾಯಣ ಪಿಶಾಲೆ ಉಪಸ್ಥಿತರಿದ್ದರು.