Slide
Slide
Slide
previous arrow
next arrow

ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಅನುಷ್ಠಾನ: ಕುಮಾರಸ್ವಾಮಿ

300x250 AD

ಹೊನ್ನಾವರ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಯ ಪ್ರತಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಸೆಂಥ್ ಅಂತೋನಿ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾಡಿನ ಜನತೆ ಹಲವಾರು ಕಷ್ಟಗಳನ್ನು ಎದುರಿಸುತ್ತಿದ್ದು, ಜನರ ಸಮಸ್ಯೆಗೆ ಮುಕ್ತಿ ಸಿಗಬೇಕೆನ್ನುವ ದೃಷ್ಟಿಯಿಂದ ಇಡೀ ರಾಜ್ಯದಲ್ಲಿ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅತ್ಯುನ್ನತವಾದ ಶಿಕ್ಷಣ, ಆರೋಗ್ಯ ಸೇವೆ, ರೈತರು ಸಾಲಗಾರರಾಗದೇ ಇರುವ ಹಾಗೆ ರೈತಪರ ಯೋಜನೆಗಳು, ಸಣ್ಣಪುಟ್ಟ ವ್ಯಾಪಾರಸ್ಥರು ಹೀಗೆ ಎಲ್ಲಾ ಸಮಾಜದ ವರ್ಗದವರು ನೆಮ್ಮದಿಯಿಂದ ಬದುಕುವಂತಾಗಬೇಕು. ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಇಲ್ಲಿಯ ಯುವಕರ ನೋವನ್ನು ಗಮನಿಸಿದ್ದೇನೆ. ನೀರಾವರಿ, ನದಿಮೂಲದಿಂದ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆ ತರಬೇಕಾಗಿದೆ. ಜಿಲ್ಲೆಯ ಹಲವೆಡೆ ಉಪ್ಪುನೀರು ಆವರಿಸಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂದರು.
ಪಂಚರತ್ನ ಯೋಜನೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದ ಯೋಜನೆ ಅಲ್ಲ. 6.5 ಕೋಟಿ ಜನತೆಯ ಭವಿಷ್ಯದ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡತನವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಮಹತ್ವದ ಯೋಜನೆ ಇದಾಗಿದೆ.  ಅಧಿಕಾರಕ್ಕೆ ಬಂದ ಬಳಿಕ ಪ್ರಥಮವಾಗಿ ತಾಲೂಕಿನ ಮುಸ್ಲಿಂ ಸಮುದಾಯದವರಿಗೆ ಹೊನ್ನಾವರದಲ್ಲಿ ಸಭಾಭವನ ಹಾಗೂ ಉರ್ದು ಶಾಲೆ ಆರಂಭಿಸಲಾಗುವುದು. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈ ಬಾರಿಯ ಚುನಾವಣೆಯಲ್ಲಿ ಸೂರಜ್ ಸೋನಿ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆನೀಡಿದರು.
ರೈತರಿಗೆ ಬಿತ್ತನೆ ಬೀಜದ ಖರೀದಿಗಾಗಿ ಪ್ರತಿ ಎಕರೆಗೆ 10 ಸಾವಿರ ರೂ. ಉಚಿತವಾಗಿ ಕೊಡುವ ರೈತಬಂಧು ಎನ್ನುವ ಹೊಸ ಯೋಜನೆ ಪ್ರಾರಂಭಿಸಲಿದ್ದೇವೆ. ಪಟ್ಟಣ ಪ್ರದೇಶದಲ್ಲಿ ವಾಸಿಸುವ ಸಣ್ಣಪುಟ್ಟ ಅಂಗಡಿಕಾರರಿಗೂ ಆರ್ಥಿಕ ನೆರವು ನೀಡುವ ಯೋಜನೆ ಜಾರಿಗೆ ತರಲಿದ್ದೇವೆ. ಸಂಧ್ಯಾ ಸುರಕ್ಷಾ ಯೋಜನೆಯ 1200 ರೂ. ಬದಲಾಗಿ 5 ಸಾವಿರ ರೂ. ನೀಡುವ ಯೋಜನೆ, ವಿಧವಾ ವೇತನದ 800 ರೂ. ಬದಲಾಗಿ 2.5 ಸಾವಿರ ರೂ. ಹೆಚ್ಚಿಸಲಿದ್ದೇವೆ ಎಂದು ಭರವಸೆ ನೀಡಿದರು.
ಜೆಡಿಎಸ್ ಮುಖಂಡ ಸೂರಜ್ ಸೋನಿ ಮಾತನಾಡಿ, ಈ ಹಿಂದೆ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ದುಡಿದಿದ್ದೆ. ಆ ಸಮಯದಲ್ಲಿ ಕೇವಲ ಹದಿನೈದು ದಿನಗಳಲ್ಲಿ ಶಾಸಕನಾಗಿ ಆಯ್ಕೆಯಾಗುವ ಹಂತಕ್ಕೆ ಬಂದಿದ್ದೆ. ಈ ನಡುವೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ನನ್ನನ್ನು ಜೈಲಿಗಟ್ಟಿದರು. ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಿ ಇನ್ನಿಲ್ಲದ ನೋವು ತಂದಿಟ್ಟರು. ನನ್ನ ನೋವಿಗೆ ಧ್ವನಿಯಾಗಿ ಕುಮಾರಸ್ವಾಮಿ ಅವರು ನನಗೆ ಹೆಗಲಿಗೆ ಹೆಗಲು ಕೊಟ್ಟು ನನ್ನ ಪರವಾಗಿ ನಿಂತರು. ಕುಮಟಾ ಹೊನ್ನಾವರ ಭಾಗದ ಜನತೆಯೂ ನನ್ನ ಮೇಲೆ ಅಪಾರವಾದ ಪ್ರೀತಿ ವಿಶ್ವಾಸ ಹೊಂದಿದ್ದು, ಈಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬಹುಮತಗಳಿಂದ ಗೆಲ್ಲಿಸುವ ಮೂಲಕ ಜನತೆ ಬೆಂಬಲ ನೀಡಬೇಕು ಎಂದು ವಿನಂತಿಸಿದರು.
ವೇದಿಕೆಯಲ್ಲಿ ಜೆ.ಡಿ.ಎನ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಇನಾಯತುಲ್ಲಾ ಶಾಬಂದ್ರಿ, ತಾಲೂಕಾ ಆದ್ಯಕ್ಷ ಟಿ.ಟಿ.ನಾಯ್ಕ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಪಿ.ಟಿ.ನಾಯ್ಕ, ಮುಖಂಡರಾದ ಕೃಷ್ಣ ಗೌಡ, ಹಳಗೇರಿ, ರಮೇಶ ನಾಯ್ಕ, ರಾಜವರ್ಧನ್ ನಾಯ್ಕ ಭಟ್ಕಳ, ರಾಜು ಮಾಸ್ತಿ ಹಳ್ಳ, ಮಂಜುನಾಥ ಗೌಡ ಹಾಗೂ ಇತರರು ಉಪಸ್ಥಿತರಿದ್ದರು. ವಿಶ್ವೇಶ್ವರ ಪಟಗಾರ ತಾವು ಬಿಡಿಸಿದ ಹೆಚ್.ಡಿ.ದೇವೆಗೌಡರ ಚಿತ್ರವನ್ನು ಕುಮಾರಸ್ವಾಮಿಯವರಿಗೆ ನೀಡಿದರು.

300x250 AD
Share This
300x250 AD
300x250 AD
300x250 AD
Back to top