ದಾಂಡೇಲಿ: ನಗರಸಭೆಯಲ್ಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನಾ ಸಭೆಯು ಗುರುವಾರ ಜರುಗಿತು.
ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್ ಅವರು 2023-24ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆ ಮಾಡಿದರು. ಒಟ್ಟು ರೂ: 62,51,25,023/- ರೂ ಜಮಾವನ್ನು ಹೊಂದಿರುವ ಬಜೆಟಿನಲ್ಲಿ ರೂ: 61,97,53,367/- ಖರ್ಚನ್ನು ತೋರಿಸಲಾಗಿದೆ. ಒಟ್ಟು ಅಂದಾಜು ರೂ: 53,71,656/- ಉಳಿತಾಯವಾಗಲಿರುವುದನ್ನು ಬಜೆಟಿನಲ್ಲಿ ತಿಳಿಸಲಾಗಿದೆ.
ಬಜೆಟಿನಲ್ಲಿ ನಗರದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದ ಸೌಂದರ‍್ಯಕರಣಕ್ಕಾಗಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶಕ್ಕಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಡಿಜಿಟಲ್ ನಾಮಫಲಕಗಳನ್ನು ಅಳವಡಿಸಲು 30 ಲಕ್ಷ ರೂ, ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ 10 ಲಕ್ಷ ರೂ, ಎಲ್ಲಾ ವಾರ್ಡ್ಗಳಲ್ಲಿ ನಾಮಫಲಕ ಅಳವಡಿಸಲು 20 ಲಕ್ಷ ರೂ, ನಗರ ವ್ಯಾಪ್ತಿಯಲ್ಲಿ ಸಿ.ಸಿ ಕ್ಯಾಮೇರವನ್ನು ಅಳವಡಿಸಲು 15 ಲಕ್ಷ ರೂ, ಸ್ಮಶಾನ ಅಭಿವೃದ್ಧಿಗಾಗಿ 10 ಲಕ್ಷ ರೂ, ಸಾರ್ವಜನಿಕ ಶೌಚಾಲಯ ದುರಸ್ತ್ತಿಗಾಗಿ 15 ಲಕ್ಷ ರೂ,ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಹೊಸ ಯಂತ್ರೋಪಕರಣ ಖರೀದಿಗಾಗಿ 1,35,00,000/- ರೂ, ಹೊಸ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕಾಗಿ 6,40,00,000/- ರೂ, ರಸ್ತೆಗಳ ನಿರ್ಮಾಣ ಮತ್ತು ನವೀಕರಣಕ್ಕಾಗಿ 5 ಕೋಟಿ ರೂ, ರಸ್ತೆ ಬದಿ ಚರಂಡಿ ನಿರ್ಮಾಣ ನಿರ್ವಹಣೆ ಸ್ಲ್ಯಾಬ್ ಅಳವಡಿಕೆಗೆ ರೂ: 5 ಕೋಟಿ ರೂ, ಉದ್ಯಾನವನಗಳ ನಿರ್ಮಾಣ ಮತ್ತು ಉನ್ನತೀಕರಣ, ನಿರ್ವಹಣೆ ಹಾಗೂ ದುರಸ್ತಿಗಾಗಿ 60 ಲಕ್ಷ ರೂ, ನಗರ ವ್ಯಾಪ್ತಿಯಲ್ಲಿ ಹೊಸ ಬೀದಿ ದೀಪಗಳ ಅಳವಡಿಕೆಗೆ 80 ಲಕ್ಷ ರೂ, ನೀರು ಸರಬರಾಜು ಸಂಬಂಧಿಸಿದ ಕಾಮಗಾರಿಗಳಿಗೆ 1,25,00,000/-ರೂ, ಯುಜಿಡಿ ನಿರ್ವಹಣೆ ಮತ್ತು ದುರಸ್ತಿಗಾಗಿ 60 ಲಕ್ಷ ರೂ ಹಣವನ್ನು ಮೀಸಲಿಡಲಾಗಿದೆ. ಪ.ಜಾತಿ, ಪ.ಪಂಗಡದ ಜನರ ಕಲ್ಯಾಣಕ್ಕಾಗಿ ಒಟ್ಟು : 37,78,505/-ರೂ, ಬಡಜನರ ಕಲ್ಯಾಣಕ್ಕಾಗಿ 12,84,612/- ರೂ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ 5,65,250/- ರೂಪಾಯಿಯನ್ನು ಕಾಯ್ದಿರಿಸಲಾಗಿದೆ.
ಬಜೆಟ್ ಮಂಡನೆಯಾದ ನಂತರ ಬಜೆಟ್ ಮೇಲೆ ಚರ್ಚೆ ನಡೆಯಿತು. ನಗರ ಸಭಾ ಸದಸ್ಯ ನರೇಂದ್ರ ಚೌವ್ಹಾಣ್ ಅವರು ಬಜೆಟಿನಲ್ಲಿ ಸೂಚಿಸಿದ ಕೆಲಸ ಕರ‍್ಯಗಳು ಆಗಬೇಕು. ಆ ನಿಟ್ಟಿನಲ್ಲಿ ಅನುಷ್ಟಾನಕ್ಕೆ ಮೊದಲ ಆಧ್ಯತೆಯನ್ನು ನೀಡಬೇಕೆಂದರು. ಬಜೆಟ್ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹಿರಿಯ ಸದಸ್ಯೆ ಯಾಸ್ಮಿನ್ ಕಿತ್ತೂರು, ಅಷ್ಪಾಕ್ ಶೇಖ್ ಬಜೆಟ್ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಪೌರಾಯುಕ್ತರಾದ ಆರ್.ಎಸ್.ಪವಾರ್ ಹಾಗೂ ನಗರ ಸಭಾ ಸದಸ್ಯರುಗಳು, ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.