ಹೊನ್ನಾವರ: ಮಹಿಳೆಯರು ಆರ್ಥಿಕ ಸ್ವಾಬಲಂಬನೆಗೆ ಮಾಸಿಕ ಸಂತೆ ಬಹುಮುಖ್ಯ ಪಾತ್ರವಹಿಸಲಿದೆ ಎಂದು ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅಭಿಪ್ರಾಯಪಟ್ಟರು.
ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ವತಿಯಿಂದ ತಾಲೂಕ ಪಂಚಾಯತಿ ಕಾರ್ಯಲಯದಲ್ಲಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ತಯಾರಿಸಿದ ವಸ್ತುಗಳನ್ನು ಮಾರಾಟವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ. ಸರ್ಕಾರ ಮಹಿಳೆಯರಿಗೆ ಇಂತಹ ಹಲವು ಯೋಜನೆಗಳನ್ನು ನೀಡುತ್ತಿದ್ದು, ಇದರ ಬಗ್ಗೆ ಮಾಹಿತಿ ಪಡೆದು ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು. ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಗ್ರಾಮೀಣ ಭಾಗದ ಸಂಜೀವಿನಿ ಸಂಘಟನೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.
ತಾಲೂಕ ಪಂಚಾಯತಿ ಆಡಳಿತಾಧಿಕಾರಿ ವಿನೋದ ಅಣ್ವೇಕರ್, ಪಂಚತಾರಾ ಹೋಟೆಲ್‌ನಲ್ಲಿ ಸಿಗುವ ವಸ್ತುಗಳಿಗಿಂತ ಇಲ್ಲಿಯ ವಸ್ತುಗಳು ಗುಣಮಟ್ಟದಿಂದ ಕೂಡಿದೆ. ಸಾರ್ವಜನಿಕರು ಇದನ್ನು ಖರೀದಿಸಬೇಕು ಎಂದರು.
ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾಸಿಕ ಸಂತೆ ತಾಲೂಕಿನಲ್ಲಿ ಯಶ್ವಸಿಯಾಗುತ್ತಿದೆ. 26 ಪಂಚಾಯತಿಯ 1260 ಸದಸ್ಯರು ಇದ್ದು, ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದೆ ಎಂದರು.
ಸಹಾಯಕ ನಿರ್ದೇಶಕ ಕೃಷ್ಣಾನಂದ, ಲೆಕ್ಕಾಧಿಕಾರಿ ಶ್ಯಾಮಲಾ, ಒಕ್ಕೂಟದ ಅಧ್ಯಕ್ಷೆ ಸರೋಜಾ ಶೆಟ್ಟಿ, ರಾಮ ಭಟ್ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಸವಿತಾ ಗೌಡ ಸ್ವಾಗತಿಸಿ, ವಿಶಾಲ್ ನಾಯ್ಕ ವಂದಿಸಿದರು. ಎನ್‌ಎಮ್‌ಆರ್‌ಎಲ್ ಅಧಿಕಾರಿ ಬಾಲಚಂದ್ರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಬಗೆಯ ತರಕಾರಿ, ತಿಂಡಿತಿನಿಸುಗಳು, ಗೃಹಪ್ರಯೋಗಿ ವಸ್ತುಗಳಾದ ಹಪ್ಪಳ, ಉಪ್ಪಿನಕಾಯಿ, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಜರುಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಂತಸದಿoದ ವಸ್ತುಗಳನ್ನು ಖರೀದಿಸಿದರು. ತಾಲೂಕ ಪಂಚಾಯತ ಸೂಕ್ತ ರೀತಿಯಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರು.